ಬೆಳಗಾವಿಯಲ್ಲಿ ತೀವ್ರ ವಿವಾದ ಎಬ್ಬಿಸಿರುವ ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಕರಣ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ನಿಯೋಗ ಒಯ್ಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಜ ಹಟ್ಟಿಹೊಳಿ ತಿಳಿಸಿದ್ದಾರೆ.

ಖಾಸಗಿ ಭಾಜಿ ಮಾರ್ಕೆಟ್ ವಿರೋಧಿ ರೈತ ಮುಖಂಡ ಸಿದಗೌಡ ಮೊದಗಿ ನೇತೃತ್ವದಲ್ಲಿ ಧರಣಿ ಮುಂದುವರಿದಿದ್ದು. ಬುಧವಾರ ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಎಂಎಲ್‍ಸಿ ಚನ್ನರಾಜ್ ಹಟ್ಟಿಹೊಳಿ, ಪ್ರತಿಭಟನಾಕಾರರ ಜೊತೆಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಚನ್ನರಾಜ್ ಹಟ್ಟಿಹೊಳಿ ಬೆಳಗಾವಿಯಲ್ಲಿ ಸರಕಾರಿ ಎಪಿಎಂಸಿ ಬಲಿಷ್ಠವಾಗಿರುವಾಗ ಸರಕಾರ ಅನಗತ್ಯವಾಗಿ ಖಾಸಗಿ ಎಪಿಎಂಸಿಗೆ ಅನುಮತಿ ನೀಡಿದೆ. ಇದು ಖಂಡನೀಯವಾಗಿದೆ.
ಇದೇ 14ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ವಿಷಯ ಎತ್ತಿ, ಖಾಸಗಿ ಎಪಿಎಂಸಿ ರದ್ಧುಪಡಿಸಿ ಸರಕಾರಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಸರಕಾರದ ಮೇಲೆ ಒತ್ತಡ ಹೇರಲಾಗುವುದು. ಇದಕ್ಕಾಗಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ನಾವು ಮೊದಲಿನಿಂದಲೂ ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಗತ್ಯವಿಲ್ಲ ಎಂದೇ ಹೇಳುತ್ತಿದ್ದೇವೆ. ಆದರೆ ರಾತ್ರೋರಾತ್ರಿ ಏಕೆ ಮತ್ತು ಹೇಗೆ ಅನುಮತಿ ನೀಡಿದರೋ ಗೊತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.