ರಾಜ್ಯದ ಇಂಟಿಲಿಜೆನ್ಸಿ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರ ಕೂಡ ವಿಫಲವಾಗಿದೆ ಎಂದು ನಾವು ನೇರವಾಗಿ ಆರೋಪಿಸುತ್ತೇವೆ. ಹಲವಾರು ವರ್ಷಗಳಿಂದ ರಾಜ್ಯದಲ್ಲಿರುವ ಕೋಮು ಸಾಮರಸ್ಯವನ್ನು ಹಾಳು ಮಾಡುವ ಕೆಲಸ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಕಾಂಗ್ರೆಸ್ ಶಾಸಕರು ಇಂದು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕೇವಲ ಸಂಸ್ಥೆಗಳಿಗೆ ಮಾತ್ರ ಕೋರ್ಟ ಆದೇಶ ಮಾಡಿದೆ. ಮುಂಚೆ ಹೇಗಿತ್ತೋ ಮತ್ತೆ ಅದಕ್ಕೆ ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ಕೆಲವು ಶಾಲೆಗಳಲ್ಲಿ ಗೇಟ್ ಮುಂದೆ ನಿಲ್ಲಿಸಿ ಅವಮಾನ ಮಾಡಲಾಗುತ್ತಿದೆ. ಅದಕ್ಕೆ ಇಂತಹ ಘಟನೆಗಳು ಆಗಬಾರದು ಎಂದು ಸಿಎಂಗೆ ಹೇಳಿದ್ದೇವೆ. ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದರು.
ಯಾವುದೇ ಹೈಕೋರ್ಟ, ಸುಪ್ರೀಂಕೋರ್ಟಗಳು ಸಂವಿಧಾನದ ಮೇಲೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸಂವಿಧಾನದ ಮೇಲೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧ ಇರುತ್ತೇವೆ. ಆದರೆ ನಮ್ಮಲ್ಲಿ ಬುರ್ಖಾ, ನಕಾಬ್, ಹಿಜಾಬ್ ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಇತ್ತಿಚಿನ ಎರಡು ತಿಂಗಳಲ್ಲಿ ಈ ಸರ್ಕಾರ ಬಂದ ಮೇಲೆ ಯಾಕೆ ಹೀಗೆ ಆಯಿತು ಎಂಬ ಬಗ್ಗೆ ಸರ್ಕಾರ ಉತ್ತರ ಕೊಡಬೇಕಾಗುತ್ತದೆ ಎಂದರು.