Vijaypura

ಕೇಸರಿ-ಹಿಜಾಬ್ ವಿವಾದದ ನಡುವೆಯೂ ಭಾವೈಕತೆಯ ಪಾಠ ಮಾಡುತ್ತಿದೆ ಈ ಮಠ

Share

ರಾಜ್ಯದಲ್ಲಿ ಹಿಜಾಬ್‌ ವಿವಾದ ತಾರಕ್ಕೇರಿದ್ದು, ಹಿಂದೂ-ಮುಸ್ಲಿಂರ ನಡುವಿನ ಸಾಮರಸ್ಯಕ್ಕೆ ಧಕ್ಕೆ ಉಟಾಗುತ್ತಿದೆ. ಆದ್ರೆ ಈ ನಡುವೆ ವಿಜಯಪುರ ಜಿಲ್ಲೆಯ ಮಠವೊಂದು ಸದ್ದಿಲ್ಲದೆ ಜಗತ್ತಿಗೆ ಭಾವೈಕ್ಯತೆಯ ಪಾಠ ಹೇಳ್ತಿದೆ. ಇಲ್ಲಿ ಹಿಂದೂ-ಮುಸ್ಲಿಂ ಎನ್ನುವ ಬೇದ-ಭಾವವಿಲ್ಲ. ಹಿಂದೂಗಳಂತೆ ಮುಸ್ಲಿಂರು ಈ ಮಠಕ್ಕೆ ಅಪ್ಪಟ ಭಕ್ತರು.. ಮಠದಲ್ಲಿ ಪ್ರತಿವರ್ಷ ನಡೆಯೋ ಜಾತ್ಯಾತೀತ ಜಾತ್ರೆಯಲ್ಲಿ ಪಾಲ್ಗೊಂಡು ಗುರುಗಳ ಗದ್ದುಗೆಗಳಿಗೆ ಪೂಜೆ ಮಾಡಿ ದರ್ಶನ ಪಡೆಯುತ್ತಾರೆ.. ಈ ಕುರಿತು ಒಂದು ಸ್ಪೆಶಲ್‌ ರಿಪೋರ್ಟ್‌ ಇಲ್ಲಿದೆ ನೋಡಿ.!

ರಾಜ್ಯದಲ್ಲಿ ಹಿಜಾಬ್‌ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ಈ ವಿವಾದ ಶಾಲಾ-ಕಾಲೇಜು ಮಟ್ಟದಲ್ಲೆ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಾಮರಸ್ಯಕ್ಕೆ ಬೆಂಕಿ ಇಡುತ್ತಿದೆ. ಆದ್ರೆ ಈ ನಡುವೆ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ನಡೆದ ಜಾತ್ಯಾತೀತ ಜಾತ್ರೆ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಇಲ್ಲಿ ಪ್ರತಿ ವರ್ಷ ನಡೆಯೋ ಮಾಘ ಸಪ್ತಾಹದಲ್ಲಿ ಎಲ್ಲ ಧರ್ಮಿಯರು ಪಾಲ್ಗೊಳ್ತಾರೆ. ಅದ್ರಲ್ಲು ವಿಶೇಷ ಅಂದ್ರೆ ಸಪ್ತಾಹದಲ್ಲಿ ಪಾಲ್ಗೊಳ್ಳುವ ಸಾವಿರಾರು ಮುಸ್ಲಿಂ ಭಕ್ತರು, ಇಲ್ಲಿರುವ ೧೧ ಗುರುಗಳ ಗದ್ದುಗೆಗಳ ದರ್ಶನ ಮಾಡಿ ಹೂವು-ಹಣ್ಣು ಸಮರ್ಪಿಸುತ್ತಾರೆ. ತೆಂಗಿನಕಾಯಿ ನೈವೇಧ್ಯಗಳನ್ನ ಸಮರ್ಪಿಸುತ್ತಾರೆ. ಗದ್ದುಗೆಗಳಿಗೆ ಭಕ್ತಿಯಿಂದ ನಮಿಸುವುದರ ಜೊತೆಗೆ ಧೂಪ ಬೆಳಗಿ ಪೂಜೆ ಕೂಡ ಸಲ್ಲಿಸ್ತಾರೆ. ಇನ್ನು ಇಲ್ಲಿ ನಡೆಯೋ ಸಹಪಂಕ್ತಿ ಭೋಜನದಲ್ಲು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ. ಹೀಗಾಗಿಯೇ ಈ ಸಪ್ತಾಹವನ್ನ ಜಾತ್ಯಾತೀತ ಜಾತ್ರೆ ಅಂತಲು ಕರೆಯುತ್ತಾರೆ..

ಈ ಇಂಚಗೇರಿ ಮಠದಲ್ಲಿ ಇಷ್ಟೊಂದು ಭಾವೈಕ್ಯತೆ ಮೂಡಲು ಕಾರಣವು ಇದೆ. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಇದೆ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಶ್ರೀಗಳು ಸರ್ವ ಧರ್ಮಿಯರನ್ನ ಒಗ್ಗೂಡಿಸಲು ೨೫ ಸಾವಿರಕ್ಕು ಅಧಿಕ ಅಂತರ್‌ ಧರ್ಮಿಯ, ಅಂತರ್‌ ಜಾತಿಯ ವಿವಾಹಗಳನ್ನ ಮಾಡಿದ್ದರು. ಜೊತೆಗೆ ತಮ್ಮದೆ ಸ್ವಂತ ಮೊಮ್ಮಗಳು ಕಾಳಮ್ಮದೇವಿಯನ್ನ ಮುಸ್ಲಿಂ ಸಮುದಾಯದ ಆದಮ್‌ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ಮೂಲಕ ೧೨ನೇ ಶತಮಾನದ ಬಸವಣ್ಣನವರ ವಿಚಾರಧಾರೆಗಳನ್ನ ಮಾಧವಾನಂದ ಶ್ರೀಗಳು ಸಾಕಾರಗೊಳಿಸಿದ್ದರು. ಇದೆ ಕಾರಣಕ್ಕೆ ಸಹಸ್ರಾರು ಮುಸ್ಲಿಂ ಸಮುದಾಯದ ಜನ ಇಂಚಗೇರಿ ಮಠಕ್ಕೆ ಅಪ್ಪಟ ಭಕ್ತರಾಗಿದ್ದಾರೆ. ಈ ಪರಂಪರೆ ಇಂದಿಗೂ ಮುಂದುವರೆದಿಕೊಂಡು ಬಂದಿರೋದು ವಿಶೇಷ..

ರಾಜ್ಯದಲ್ಲಿ ಹಿಜಾಬ್‌ ವಿಚಾರವನ್ನೆ ಹಿಡಿದುಕೊಂಡು ರಾಜಕೀಯ ಪಕ್ಷಗಳು ವಿವಾದ ಸೃಷ್ಟಿಸಿ ಇನುಕಿ ನೋಡುವ ಕೆಲಸ ಮಾಡ್ತೀವೆ. ಆದ್ರೆ ನಮ್ಮದೆ ನಾಡಿದ ಜಾತ್ಯಾತೀತ ಮಠವೊಂದು ಸದ್ದೆ ಇಲ್ಲದಂತೆ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಪ್ರಜ್ಞೆಯಂತೆ ನಿಂತಿರೋದು ವಿಶೇಷವೇ ಸರಿ..!

Tags:

error: Content is protected !!