ವಂಶ ಪಾರಂಪರಿಕ ಪಕ್ಷಗಳು ನಮ್ಮ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ. ಕಾಂಗ್ರೆಸ್ ಇಲ್ಲದಿದ್ದರೆ ತುರ್ತು ಪರಿಸ್ಥಿತಿ, ಸಿಖ್ ದಂಗೆ, ಕಾಶ್ಮೀರಿ ಪಂಡಿತರ ನಿರ್ಗಮನ ಸಂಭವಿಸುತ್ತಿರಲಿಲ್ಲ. ಕೆಲವು ಜನರ ಅಭಿಪ್ರಾಯದಲ್ಲಿ ಇತಿಹಾಸವೆಂದರೆ ಅದು ಕೇವಲ ಒಂದು ಕುಟುಂಬಕ್ಕೆ ಮಾತ್ರ ಸಂಬಂಧಿಸಿದ್ದು. ಅಲ್ಲಿ ದೇಶದ ಇತಿಹಾಸ ಗೋಚರವಾಗುವುದೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ನಿನ್ನೆ ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದ ಪ್ರಧಾನಿ ಮೋದಿ ಇಂದು ಸದನದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ವಾಕ್ಸಮರ ಮುಂದುವರಿಸಿದರು. ಕಾಂಗ್ರೆಸ್ ಭಾರತಕ್ಕೆ ಅಡಿಪಾಯವನ್ನು ಹಾಕಿತು, ಬಿಜೆಪಿ ಕೇವಲ ಧ್ವಜವನ್ನು ಹಾರಿಸಿತು ಎಂದು ಸದನದಲ್ಲಿ ಹೇಳಲಾಗಿದೆ. ಕೆಲವರು ಭಾರತವು 1947ರಲ್ಲಿ ಹುಟ್ಟಿದೆ ಎಂದುಕೊಂಡಿದ್ದಾರೆ. ಈ ಆಲೋಚನೆಯಿಂದಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಈ ಮನಸ್ಥಿತಿಯು ಕಳೆದ 50 ವರ್ಷಗಳಿಂದ ದುಡಿಯುವ ಅವಕಾಶ ಪಡೆದವರ ನೀತಿಗಳ ಮೇಲೆ ಪರಿಣಾಮ ಬೀರಿದೆ. ಇದು ವಿಕೃತಿಗಳನ್ನು ಕೂಡ ಸೃಷ್ಟಿಸಿತು. ಈ ಪ್ರಜಾಪ್ರಭುತ್ವ ನಮಗೆ ದಕ್ಕಿರುವುದು ನಿಮ್ಮ ಔದಾರ್ಯದಿಂದಲ್ಲ. ಪ್ರಜಾಪ್ರಭುತ್ವದ ಕತ್ತು ಹಿಸುಕಿದವರು ಎಂದು ಕಿಡಿಕಾರಿದರು.

ಒಂದು ರಾಜಕೀಯ ಪಕ್ಷದಲ್ಲಿ ಒಂದು ಕುಟುಂಬವು ಹೆಚ್ಚು ಪ್ರಚಲಿತವಾದಾಗ ದೇಶದ ನಿಜವಾದ ರಾಜಕೀಯ ಪ್ರತಿಭೆಗಳಿಗೆ ತೊಂದರೆಯಾಗುತ್ತದೆ. ಕಾಂಗ್ರೆಸ್ ನಾ ಹೋತಿ, ತೋ ಕ್ಯಾ ಹೋತಾ ಎಂದು ಹೇಳಲಾಗಿತ್ತು. ಭಾರತವೇ ಇಂದಿರಾ, ಇಂದಿರಾ ಅವರೇ ಭಾರತ ಎಂಬ ಚಿಂತನೆಯ ಫಲವನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಇಲ್ಲದಿದ್ದರೆ, ತುರ್ತು ಪರಿಸ್ಥಿತಿ, ಸಿಖ್ ದಂಗೆಗಳು, ಕಾಶ್ಮೀರಿ ಪಂಡಿತರ ವಲಸೆ ನಡೆಯುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಕಾಂಗ್ರೆಸ್ ಕೇವಲ ವಂಶ ಪಾರಂಪರಿಕ ರಾಜಕಾರಣದತ್ತ ಕೇಂದ್ರೀಕರಿಸಿತೇ ವಿನಃ ದೇಶದ ಅಭಿವೃದ್ಧಿಯತ್ತ ಹೆಚ್ಚು ಗಮನ ನೀಡಲಿಲ್ಲ ಎಂದು ಹರಿಹಾಯ್ದರು.
ಇತಿಹಾಸವನ್ನು ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅರ್ಬನ್ ನಕ್ಸಲ್ ಬಲೆಗೆ ಸಿಲುಕಿದೆ. ನಗರ ನಕ್ಸಲರು ಅವರ ಸಂಪೂರ್ಣ ಆಲೋಚನಾ ವಿಧಾನವನ್ನು ಸೆರೆಹಿಡಿದಿದ್ದಾರೆ. ನಗರ ನಕ್ಸಲರು ಅವರ ದುಃಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದಾರೆ. ಭಾರತದ ಉಜ್ವಲ ಭವಿಷ್ಯದಲ್ಲಿ ನಂಬಿಕೆ ಇಡುವಂತೆ ನಾನು ಎಲ್ಲರನ್ನು ವಿನಂತಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನು ದೇಶದ ಯುವಕರ ಪ್ರಯತ್ನದಿಂದಾಗಿ ಭಾರತವು ಸ್ಟಾರ್ಟ್‍ಅಪ್‍ಗಳ ವಿಷಯದಲ್ಲಿ ಅಗ್ರ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ. ಸರ್ಕಾರವು ಹೆಚ್ಚಿನ ಉದ್ಯೋಗವನ್ನು ಒದಗಿಸುವ ಕೃಷಿ, ಎಂಎಸ್‍ಎಂಇ ವಲಯದ ಮೇಲೆ ಕೇಂದ್ರೀಕರಿಸಿದೆ. ಇನ್ನು ದೇಶದಲ್ಲಿ ಕೋವಿಡ್-19 ಲಸಿಕೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ 100 ಪ್ರತಿಶತದಷ್ಟು ಲಸಿಕೆ ವಿತರಿಸಲು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ 2 ವರ್ಷಗಳಲ್ಲಿ ಕೆಲವು ರಾಜಕೀಯ ಪಕ್ಷಗಳ ಕೆಲವು ನಾಯಕರು ಅಪ್ರಬುದ್ಧತೆಯನ್ನು ತೋರಿಸಿದ್ದಾರೆ. ಇದು ರಾಷ್ಟ್ರವನ್ನು ನಿರಾಶೆಗೊಳಿಸಿದೆ. ರಾಜಕೀಯ ಸ್ವಾರ್ಥಕ್ಕಾಗಿ ಹೇಗೆ ಆಟಗಳನ್ನು ಆಡಲಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಭಾರತೀಯ ಲಸಿಕೆಗಳ ವಿರುದ್ಧ ಪ್ರಚಾರಗಳನ್ನು ಮಾಡಲಾಗಿದೆ ಎಂದು ತಮ್ಮ ಬೇಸರ ಹೊರ ಹಾಕಿದರು.