Banglore

ಕನ್ನಡ ಸಾರಸ್ವತ ಲೋಕಕ್ಕೆ ಬಹಳ ದೊಡ್ಡ ಹಾನಿ: ಚೆನ್ನವೀರ ಕಣವಿ ಅಗಲಿಕೆಗೆ ಸಿಎಂ ಬೊಮ್ಮಾಯಿ ಸಂತಾಪ

Share

ನಾಡೋಜ ಚೆನ್ನವೀರ ಕಣವಿ ಅವರು ನಮ್ಮನ್ನು ಅಗಲಿದ್ದಾರೆ. ನಾಡು ಕಂಡಂತಹ ಅತ್ಯಂತ ಸೃಜನಶೀಲ ಸಾಹಿತ್ಯ ರಚನೆ ಮಾಡಿ, ತಮ್ಮದೇಯಾದ ಸ್ಥಾನವನ್ನು ಕನ್ನಡ ಸಾರಸ್ವತ ಲೋಕದಲ್ಲಿ ಪಡೆದುಕೊಂಡಿದ್ದರು. ನಾಡೋಜ ಪ್ರಶಸ್ತಿಗೂ ಕೂಡ ಭಾಜನರಾಗಿದ್ದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸ್ಮರಿಸಿಕೊಂಡರು.

ನಾಡೋಜ ಚೆನ್ನವೀರ ಕಣವಿ ಅವರು ಇಂದು ವಿಧಿವಶರಾಗಿರುವ ಹಿನ್ನೆಲೆ ಬೆಂಗಳೂರಿನ ಆರ್‍ಟಿ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಕಳೆದ ನಾಲ್ಕು ದಶಕಗಳಿಂದ ಚೆನ್ನವೀರ ಕಣವಿ ಅವರು ಮತ್ತು ಅವರ ಕುಟುಂಬಸ್ಥರು ನಮಗೆ ಬಹಳಷ್ಟು ಆತ್ಮೀಯರಾಗಿದ್ದರು. ಸಜ್ಜನಿಕೆಗೆ ಸಾಕಾರಮೂರ್ತಿ, ಅವರ ಮಾತುಗಳು ಅತ್ಯಂತ ಮಾನವೀಯತೆಯ ಮತ್ತು ಮನಮುಟ್ಟುವ ಮಾತುಗಳಿಂದ ಮನಸ್ಸನ್ನು ಗೆಲ್ಲುವ ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ನಾಲ್ಕು ದಶಕಗಳಿಂದ ನನಗೆ ಗೊತ್ತಿದ್ದರೂ ಕೂಡ ಒಮ್ಮೆಯೂ ಅವರು ಕೋಪಗೊಂಡಿದ್ದನ್ನು ನಾನು ನೋಡಿಲ್ಲ.

ಎಲ್ಲ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಪರಿಹಾರ ಸೂಚಿಸುವ ಸಾಹಿತ್ಯ ರಚನೆ ಮಾಡಿದ್ದರು. ಸಾಹಿತ್ಯದ ಮುಖಾಂತರ ತಮ್ಮ ಕಲ್ಪನೆ ಮತ್ತು ವಾಸ್ತವಾಂಶ ಎರಡನ್ನೂ ಬಹಳ ಪರಿಣಾಮಕಾರಿಯಾಗಿ ಬಿಂಬಿಸಿದ್ದರು. ಹಲವಾರು ಪ್ರಶಸ್ತಿಗೆ ಅವರು ಭಾಜನರಾಗಿದ್ದರು. ಪ್ರಶಸ್ತಿಗೆ ಗೌರವ ಬರುವ ರೀತಿಯಲ್ಲಿ ಅವರ ವ್ಯಕ್ತಿತ್ವ ಇತ್ತು. ನಾಡೋಜ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದ ಸಂದರ್ಭದಲ್ಲಿಯೂ ಕೂಡ ತಮ್ಮ ಸಂಯಮ, ಗಾಂಭೀರ್ಯತೆಯನ್ನು ಮೆರೆದಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಓರ್ವ ಧೀಮಂತ ಮಾರ್ಗದರ್ಶಕ ಇಲ್ಲದಂತಾಗಿದೆ.

ಸಾತ್ವಿಕ ಚಿಂತಕರ ಕೊರತೆ ಇರುವ ಇಂತಹ ಸಂದರ್ಭದಲ್ಲಿ ಚೆನ್ನವೀರ ಕಣವಿ ಇರುವಿಕೆ ಬಹಳ ಪ್ರಸ್ತುತವಿತ್ತು. ಇಡೀ ಕನ್ನಡ ನಾಡು ನಷ್ಟದಲ್ಲಿದೆ. ಸಾಹಿತ್ಯ ಲೋಕದ ಒಬ್ಬೊಬ್ಬರನ್ನೇ ಕಳೆದುಕೊಳ್ಳುತ್ತಿದ್ದೇವೆ ಸಿದ್ಧಲಿಂಗಯ್ಯ, ಚಂಪಾ ಅವರನ್ನು ಕಳೆದುಕೊಂಡಿದ್ದೇವು ಇದೀಗ ಚೆನ್ನವೀರ ಕಣವಿ ಅವರನ್ನು ಕಳೆದುಕೊಂಡಿದ್ದೇವೆ. ಈಗ ಕಳೆದುಕೊಂಡಿರುವ ಮಹನೀಯರ ಸ್ಮರಣೆ ಮತ್ತು ಪ್ರೇರಣೆ ಪಡೆದುಕೊಂಡು ಹೊಸ ಸಾಹಿತಿಗಳು ಬರಬೇಕು, ಹೊಸ ಚಿಂತನೆ ಆಗಬೇಕು, ಅವರ ಕೂಡ ಈ ಮೇರು ಸ್ಥಾನಕ್ಕೆ ಏರಬೇಕು. ಅಂದಾಗ ಮಾತ್ರ ಕರ್ನಾಟಕದ ಶ್ರೀಮಂತ ಸಾಹಿತ್ಯ ನಿರಂತರವಾಗಿ ಮುಂದುವರಿಯುತ್ತದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ನಮ್ಮ ಕರ್ನಾಟಕಕ್ಕೆ ಇದೆ. ಇನ್ನಷ್ಟು ಜ್ಞಾನಪೀಠ ಪ್ರಶಸ್ತಿ ಬರುವ ರೀತಿಯಲ್ಲಿ ಸಾಹಿತ್ಯ ನಾಡಿಗೆ ಕೊಡುಗೆ ಕೊಡಬೇಕಿದೆ. ಈ ಮೂಲಕ ಚೆನ್ನವೀರ ಕಣವಿ ಅವರಿಗೆ ನಿಜವಾದ ಗೌರವ ಮತ್ತು ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ. ಸಾಹಿತ್ಯ ಲೋಕಕ್ಕೆ ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಸಾಹಿತಿಗಳು ಕೊಡುವ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಸಿಎಂ ಭರವಸೆ ನೀಡಿದರು.

 

Tags:

error: Content is protected !!