State

ಊರಿಗೆ ಮನುಷ್ಯ ಅಲ್ಲ, ಸ್ಮಶಾನಕ್ಕೆ ಹೆಣ ಅಲ್ಲ: ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ಲೇವಡಿ

Share

ಕಾಂಗ್ರೆಸ್‍ನವರದ್ದು ಊರಿಗೆ ಮನುಷ್ಯ ಅಲ್ಲ, ಸ್ಮಶಾನಕ್ಕೆ ಹೆಣ ಅಲ್ಲ ಎಂಬಂತ ಪರಿಸ್ಥಿತಿ ಆಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದರು.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಆರ್.ಅಶೋಕ್ ಹಿಜಾಬ್ ವಿಚಾರದಲ್ಲಿ ನಾವು ಅವರ ಪರವಾಗಿದ್ದೇವೆ ಎನ್ನಲು ಡಿ.ಕೆ.ಶಿವಕುಮಾರ್ ಬಿಡುತ್ತಿಲ್ಲ. ನಾವು ಹಿಂದೂ ಪರ ಇದ್ದೇವೆ ಎನ್ನುವುದಕ್ಕೆ ಸಿದ್ದರಾಮಯ್ಯ ಬಿಡುತ್ತಿಲ್ಲ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಫೈಟ್ ಅಷ್ಟೇ. ವಿಧಾನಸಭೆಯಲ್ಲಿ ಹಿಜಾಬ್ ಬಗ್ಗೆ ಕಾಂಗ್ರೆಸ್ ನಾಯಕರು ಚರ್ಚಿಸಬೇಕಿತ್ತು ಅಲ್ಲವೇ..? ಚರ್ಚೆ ಮಾಡಿದ್ರೆ ವೋಟ್ ಹೋಗುತ್ತದೆ. ವೋಟ್ ಹೋಗೋ ಕೆಲಸವನ್ನು ನಾವು ಮಾಡಬಾರದು ಎಂದು ತೀರ್ಮಾನಿಸಿ ಈಶ್ವರಪ್ಪರನ್ನು ಹಿಡಿದುಕೊಂಡಿದ್ದಾರೆ ಎಂದರು ಕಿಡಿಕಾರಿದರು.

ಇನ್ನು ನಾವು ಹಿಂದೆ ರೈತರು, ಬಡವರ ಬಗ್ಗೆ ಅಹೋರಾತ್ರಿ ಧರಣಿ ಮಾಡಿದ್ದೇವೆ. ಆದರೆ ಕಾಂಗ್ರೆಸ್‍ನವರ ಧರಣಿಯಲ್ಲಿ ಬಡವರ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನಾಯಕರ ಸ್ವಾರ್ಥ ಅಡಗಿದೆ. ಈಶ್ವರಪ್ಪ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೂವರನ್ನು ಬಿಟ್ಟರೆ ಇದರಲ್ಲಿ ಏನಿದೆ..? ಆ ಮೂವರಿಗಾಗಿ ಇಡೀ ಸದನ ಹಾಳು ಮಾಡುತ್ತಿದ್ದಾರೆ. ಪ್ರತಿ ದಿನ ಕಲಾಪ ನಡೆಸಲು 1 ಕೋಟಿ ಜನರ ತೆರಿಗೆ ದುಡ್ಡು ಖರ್ಚು ಆಗುತ್ತದೆ. ಜನರ ದುಡ್ಡು ತೆಗೆದುಕೊಂಡು ವಿಧಾನಸೌಧದಲ್ಲಿ ಆರಾಮವಾಗಿ ನಿದ್ದೆ ಮಾಡಿದ್ರೆ ಏನು ಅರ್ಥ ಬರುತ್ತದೆ ಎಂದು ಕಿಡಿಕಾರಿದರು.

ಮುಂದುವರಿದು ಮಾತನಾಡಿದ ಆರ್.ಅಶೋಕ್ ಬರೀ ಈಶ್ವರಪ್ಪ, ಡಿ.ಕೆ.ಶಿವಕುಮಾರ್ ಎಂದು ತೋಳ ಏರಿಸೋದು, ಹೊಡೆದಾಡೋದು ಸರಿಯಲ್ಲ. ಇದಕ್ಕಾ ನೀವು ವಿಧಾನಸೌಧಕ್ಕೆ ಬರೋದು..? ವಿಧಾನಸೌಧವನ್ನು ಕೆಂಗಲ್ ಹಣಮಂತಯ್ಯ ಅವರು ಕಟ್ಟಿದ್ದು ಬಡವರಿಗೋಸ್ಕರ ಕುಸ್ತಿ ಆಡೋದಿಕ್ಕೆ ಕಟ್ಟಿಲ್ಲ. ದಯವಿಟ್ಟು ಕಾಂಗ್ರೆಸ್‍ನವರು ಹಿಜಾಬ್, ಕೇಸರಿ ಬಗ್ಗೆ ತಮ್ಮ ನಿಲವು ಏನು ಎಂದು ಹೇಳಬೇಕು ಎಂದು ಆಗ್ರಹಿಸಿದರು.

Tags:

error: Content is protected !!