ಸಮವಸ್ತ್ರ ವಿವಾದದ ಹಿಂದೆ ಕಾಣದ ಕೈಗಳ ಷಡ್ಯಂತ್ರ ಇರುವ ಬಗ್ಗೆ ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈಗಾಗಲೇ ಅನೇಕ ವಿಚಾರಗಳು ನಮ್ಮ ಹಾಗೂ ಪೊಲೀಸರ ಗಮನಕ್ಕೆ ಬಂದಿವೆ. ನಮ್ಮ ಪೊಲೀಸರು ಅಂತವರ ಬೆನ್ನು ಬಿದ್ದಿದ್ದಾರೆ, ಅವರನ್ನು ಕಂಡು ಹಿಡಿದು, ಅವರ ಮುಖ ಕಳಚುವ ಕೆಲಸ ಆಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ದೇಶದಲ್ಲಿ ಛಿದ್ರಕಾರಿ ವಾತಾವರಣ ಸೃಷ್ಟಿ ಮಾಡಬೇಕು ಎಂದೇ ಹುಟ್ಟಿಕೊಂಡಿರುವ ಕೆಲ ಮತಾಂಧ ಸಂಘಟನೆಗಳು ಖಂಡಿತವಾಗಲೂ ಇದರ ಹಿಂದಿವೆ. ಸಾರ್ವಜನಿಕರು, ನಮ್ಮ ವಿದ್ಯಾರ್ಥಿಗಳು, ಪೋಷಕರು ಇದನ್ನು ಅರ್ಥ ಮಾಡಿಕೊಳ್ಳದೇ ಹೋದರೆ ತುಂಬಾ ಕಷ್ಟವಾಗುತ್ತದೆ. ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಅವರ ಮುಖ ಕಳಚುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಇಂತಹ ಪರಿಸ್ಥಿತಿಯಲ್ಲಿ ಏನು ಆಗಬಾರದು ಎಂದು 144 ಸೆಕ್ಷನ್ ಜಾರಿ ಮಾಡಿದ್ದೇವೆ. ಮಕ್ಕಳ ಮನಸ್ಸು ಕದಡಬಾರದು, ಅದನ್ನು ಆದಷ್ಟು ಶಾಂತಿಯುತವಾಗಿ ತಿಳಿಗೊಳಿಸಬೇಕಿದೆ. ಈ ಮತೀಯ ಶಕ್ತಿಗಳು, ಮತಾಂಧರು, ತಮ್ಮ ಮೂಗಿನ ನೇರಕ್ಕೆ ನಡೆಯಬೇಕು ಎಂದು ಈ ದೇಶದಲ್ಲಿ ಅಪೇಕ್ಷೆ ಪಡುತ್ತಿರುವವರ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗಬೇಕಿದೆ. ಇದು ಏನಾಗುತ್ತಿದೆ, ಎಲ್ಲಿಗೂ ಹೋಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಯಾರೂ ಉರಿಯು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಅದನ್ನು ಆರಿಸುವ ಕೆಲಸವನ್ನು ಮಾಡಬೇಕು. ಶಾಂತಿ, ಸೌಹಾರ್ದತೆಯಿಂದ ನಮ್ಮ ಮಕ್ಕಳು ದೇಶದ ಬಗ್ಗೆ ವಿಚಾರ ಮಾಡುವ ಹಾಗೆ, ಏಕ ವ್ಯಕ್ತಿಯ ರೀತಿಯಲ್ಲಿ ದೇಶ ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿಗಳು ಎದ್ದು ನಿಲ್ಲುವ ಹಾಗೆ ನಾವೆಲ್ಲಾ ಪ್ರೇರಣೆ ಮಾಡಬೇಕಿದೆ ಎಂದರು.
ಇನ್ನು ನಿನ್ನೆ ವಿಚಾರಣೆ ಮುಗಿಯಬಹುದು ಎಂದು ಭಾವಿಸಿದ್ದೇವು. ಆದರೆ ಕೋರ್ಟ ಅಭಿಪ್ರಾಯ ಪಟ್ಟು ಪೂರ್ಣ ಪೀಠಕ್ಕೆ ಪ್ರಕರಣ ಹಸ್ತಾಂತರ ಮಾಡಿದೆ, ಅಲ್ಲದೇ ಪೂರ್ಣ ಪೀಠದ ತಂಡವನ್ನು ಕೂಡ ಮುಖ್ಯ ನ್ಯಾಯಾಧೀಶರು ನೇಮಕ ಮಾಡಿದ್ದಾರೆ. ಇಂದು ಪೂರ್ಣ ಪೀಠದ ಮುಂದೆ ವಿಚಾರಣೆ ನಡೆಯಲಿದೆ. ಬಹುಶಃ ಇಂದು ಅಥವಾ ನಾಳೆ ವಿಚಾರಣೆ ಮುಗಿಯಬಹುದು, ಬಹಳ ಬೇಗ ತೀರ್ಪು ಬಂದು ವಾತಾವರಣ ತಿಳಿಯಾಗಬೇಕು ಎಂದರು.
ಕೋರ್ಟ ತೀರ್ಪು ಏನು ಬರಬಹುದು ಎಂಬ ಪ್ರಶ್ನೆಗೆ ಕೋರ್ಟ ತೀರ್ಪಿನ ಬಗ್ಗೆ ನಾನೇನೂ ಹೇಳೋದಿಕ್ಕೆ ಆಗೋದಿಲ್ಲ. ಆದರೆ ಬೇರೆ ಬೇರೆ ಕೋರ್ಟಗಳ ತೀರ್ಮಾನಗಳು, ಸರ್ಕಾರಕ್ಕೆ ಇರುವ ಅಧಿಕಾರ ಸೇರಿ ಎಲ್ಲವನ್ನೂ ಕೋರ್ಟ ಪರಿಗಣಿಸಬಹುದು. ನಮ್ಮ ಸರ್ಕಾರದ ಪರವಾಗಿ ಇರುವ ವಕೀಲರು ಕೂಡ ಬಹಳ ಸಮರ್ಥವಾಗಿ ವಾದ ಮಂಡಿಸುತ್ತಿದ್ದಾರೆ. ತೀರ್ಪು ಸರ್ಕಾರದ ನಿಯಮಾವಳಿ ಪ್ರಕಾರ ಬರಬಹುದು ಎಂಬ ನಿರೀಕ್ಷೆಯಿದೆ ಎಂದು ಗೃಹ ಸಚಿವರು ಹೇಳಿದರು.