ಕಾಂಗ್ರೆಸ್‍ನವರು ಈಶ್ವರಪ್ಪ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ತಪ್ಪು ಅರ್ಥವನ್ನು ಜನರಿಗೆ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅದರಲ್ಲಿ ಕಾನೂನು ವಿರೋಧಿ ಅಂಶಗಳು ಇಲ್ಲ. ತೆಗೆದುಕೊಳ್ಳಲು ಯಾವುದೇ ವಿಷಯ ಇಲ್ಲದ ಕಾರಣ ಇದನ್ನು ತೆಗೆದುಕೊಂಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು.

ಬೆಂಗಳೂರಿನ ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಕಾಂಗ್ರೆಸ್‍ನವರದ್ದು ಜನ ವಿರೋಧಿ ಧೋರಣೆಯಾಗಿದೆ. ಧರಣಿ, ಅಹೋರಾತ್ರಿ ಧರಣಿ ಮಾಡೋದು ಈ ಹಿಂದೆ ವಿಧಾನಸಭೆಯಲ್ಲಿ ಹಲವು ಬಾರಿ ಆಗಿದೆ. ಆದರೆ ಅದು ಜನಪರ, ರೈತರು, ಜನಸಾಮಾನ್ಯರ ವಿಚಾರಗಳು, ರಾಜ್ಯದ ಹಿತದೃಷ್ಟಿಯಿಂದ ಏನಾದ್ರು ಇದ್ದರೆ ಆ ಸಂದರ್ಭದಲ್ಲಿ ಧರಣಿಗಳು ಆಗಿವೆ. ಇದೇ ಮೊದಲ ಬಾರಿಗೆ ವಿನಾಕಾರಣ ವಿರೋಧ ಪಕ್ಷದವರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಇದು ಒಂದು ಜವಾಬ್ದಾರಿಯುತ ಪಕ್ಷ ಮಾಡುವಂತಹದಲ್ಲ. ವಿರೋಧ ಪಕ್ಷ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದೆ. ಇದರಲ್ಲಿ ರಾಜಕಾರಣದ ಏನೋ ಲಾಭ ಸಿಗುತ್ತದೆ ಎಂದು ಈ ತರಹ ಮಾಡುತ್ತಿದ್ದಾರೆ. ಆದರೆ ಖಂಡಿತವಾಗಲೂ ಇದರಲ್ಲಿ ರಾಜಕೀಯವಾಗಿ ಅಥವಾ ಕ್ರೆಡಿಬಿಲಿಟಿಯಾಗಿ ಇನ್ನು ಹೆಚ್ಚುಗಾರಿಕೆ ಆಗೋದಿಲ್ಲ ಎಂದು ವಾಗ್ದಾಳಿ ಮಾಡಿದರು.
ಸಮವಸ್ತ್ರ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಇಡೀ ಕರ್ನಾಟಕ ಜನತೆ, ಸಮಾಜ, ಸರ್ಕಾರ ಅವರವರ ಜವಾಬ್ದಾರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಶಾಲಾ, ಕಾಲೇಜುಗಳಲ್ಲಿ ಶಾಂತಿ ಮೂಡಬೇಕು. ಮೊದಲಿನ ತರಹವೇ ವಿದ್ಯಾರ್ಜನೆ ಆಗಬೇಕು. ಬರುವ ತಿಂಗಳಲ್ಲಿ ಬರುವ ಪರೀಕ್ಷೆಗೆ ಯಾವುದೇ ತೊಂದರೆ ಆಗಬಾರದು. ಮಕ್ಕಳಲ್ಲಿ ಯಾವುದೇ ತರಹದ ಗೊಂದಲಗಳನ್ನು ಸೃಷ್ಟಿ ಮಾಡೋದನ್ನು ನಿಲ್ಲಿಸಬೇಕು ಎಂದು ನಾವೆಲ್ಲಾ ಸೇರಿ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಸಹಕಾರಿಯಾಗಿ ಕೆಲಸ ಮಾಡೋದು ಬಿಟ್ಟು ಆ ವಿಚಾರದಲ್ಲಿ ನಾವೆಲ್ಲಾ ಸೇರಿ ವಿಧಾನಸಭೆ ಮೂಲಕ ಒಂದು ಸಂದೇಶ ಕಳಸ ಬಹುದಿತ್ತು. ಇನ್ನು ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿದೆ, ನ್ಯಾಯಾಲಯದ ಆದೇಶ ನಾವು ಪಾಲನೆ ಮಾಡಬೇಕು, ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದನ್ನು ತಿಳಿಸಬೇಕಾಗಿತ್ತು. ಆದರೆ ಅದನ್ನು ಬಿಟ್ಟು ಧರಣಿ ಮಾಡುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.
ಇನ್ನು ಸಂವಿಧಾನದಲ್ಲಿ ನ್ಯಾಯಾಂಗಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಇದು ಅಂತಿಮವಾದ ನ್ಯಾಯ ಕೊಡುವಂತಹದು. ನಮ್ಮ ಜವಾಬ್ದಾರಿ ಶಾಂತಿ ನೆಲೆಸುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವ ಬಗ್ಗೆ ಸದನದಲ್ಲಿ ನಾವು ಒಟ್ಟಾಗಿ ಆಡಳಿತ, ವಿರೋಧ ಪಕ್ಷ ಎನ್ನದೇ ಒಟ್ಟಾಗಿ ಆ ಸಂದೇಶ ಕಳಿಸುವ ಕೆಲಸ ಮಾಡಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಇರುವಂತಹ ಸಮಸ್ಯೆಯನ್ನು ಶಮನ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇವರು ಇದೆಲ್ಲವನ್ನು ಬಿಟ್ಟು ಈ ಒಂದು ಹೇಳಿಕೆಯ ಹಿನ್ನೆಲೆಯಲ್ಲಿ ಅದೂ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗದ ಹೇಳಿಕೆಯನ್ನು ಎತ್ತಿಕೊಂಡು ಈಶ್ವರಪ್ಪನವರು ಮಾಡದ ತಪ್ಪಿಗೆ ಧರಣಿ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡರು.