ಬೆಳಗಾವಿ ತಾಲೂಕಿನ ಹಿಂಡಲಗಾ ಸುಳಗಾ ಗ್ರಾಮದಲ್ಲಿ ರಸ್ತೆ ಅತಿಕ್ರಮಣವಾಗಿದ್ದು ಅದನ್ನು ತೆರವುಗೊಳಿಸಿ, ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಳಗಾ ಗ್ರಾಮದ ಶಂಕರಗಲ್ಲಿ ಮತ್ತು ದೇಶಪಾಂಡೆ ಗಲ್ಲಿಯ ರಸ್ತೆ ಅಭಿವೃದ್ಧಿಗೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ಕೊಟ್ಟಿದ್ದಾರೆ. ಆದರೆ ಈ ರಸ್ತೆಯಲ್ಲಿ ಜಾಗ ಅತಿಕ್ರಮಣ ಆಗಿದೆ ಎಂದು ಗ್ರಾಮದ ಶಂಕರ್ ಪಾಟೀಲ್, ಲಕ್ಷ್ಮಣ ಕುಡಚಿಕರ್, ಶಿವಾಜಿ ಕುಡಚಿಕರ್, ಶಿವಾಜಿ ಪಾಟೀಲ್, ಕಲ್ಲಪ್ಪ ಕುಡಚಿಕರ್ ಸೇರಿದಂತೆ ಇನ್ನಿತರರು ಗ್ರಾಮ ಕಚೇರಿಗೆ ಭೇಟಿ ನೀಡಿ ಪಿಡಿಓ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅತಿಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಕೆಲಸ ಆರಂಭಿಸಬೇಕು ಇಲ್ಲದಿದ್ರೆ ಗ್ರಾಮ ಪಂಚಾಯತಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಇನ್ನು ಹಲವರು ಉಪಸ್ಥಿತರಿದ್ದು, ಅತಿಕ್ರಮಣ ತೆರವುಗೊಳಿಸಿ ರಸ್ತೆ ಕಾಮಗಾರಿ ಮಾಡುವಂತೆ ಆಗ್ರಹಿಸಿದ್ದು, ಇದಕ್ಕೆ ಅಧಿಕಾರಿಗಳು ಯಾವ ರೀತಿಯ ಕ್ರಮಕ್ಕೆ ಮುಂದಾಗುತ್ತಾರೆ ಎಂದು ಕಾದು ನೋಡಬೇಕಿದೆ.