ಮಹಾರಾಷ್ಟ್ರದ ಖದೀಮರಿಬ್ಬರು ಸೇನೆ ಸೇರಲು ಕರ್ನಾಟಕದಲ್ಲಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಪೊಲೀಸರ ಅತಿಥಿಗಳಾಗಿದ್ದಾರೆ. ತನಿಖೆಯ ವೇಳೆ ಕಿರಾತಕರ ಪ್ಲ್ಯಾನ್ ಬಯಲಿಗೆ ಬಂಧಿದ್ದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಮಹಾರಾಷ್ಟ ಮೂಲದ ಅಜೀತ್ ಕೊಂಡೆ ಹಾಗೂ ಚವ್ಹಾಣ್ ರೋಹಿತ್ ಎಂಬವರೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರ್ಮಿ ಸೇರುವ ಬದಲು ಜೈಲು ಪಾಲಾದ ಕಿರಾತಕರಾಗಿದ್ದಾರೆ. ಇಬ್ಬರಲ್ಲೂ ಆರ್ಮಿಗೆ ಸೇರಲು ಬೇಕಾದ ಎಲ್ಲಾ ಸಾಮಥ್ರ್ಯವಿದ್ದು ವಾಮಮಾರ್ಗವನ್ನು ಆಯದುಕೊಂಡಿದ್ದೇ ಜೈಲು ಪಾಲಾಗಲು ಕಾರಣವಾಗಿದೆ. 2020ರಲ್ಲಿ ಕೊಡಗಿನಲ್ಲಿ ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ಇಲ್ಲಿನ ಸ್ಥಳೀಯರ ಸಹಾಯದಿಂದ ಅಜೀತ್ ಕೊಂಡೆ ಹಾಗೂ ಚವ್ಹಾಣ್ ರೋಹಿತ್ ಕರ್ನಾಟಕದ ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮೊದಲಾದ ದಾಖಲಾತಿಗಳನ್ನು ಸೃಷ್ಟಿಸಿ ಸೇನೆಗೆ ಸೇರಲು ಮುಂದಾಗಿದ್ದರು. ಇನ್ನು ಈ ಕುರಿತಂತೆ ವಿಜಯನಗರ ಹಾಗೂ ಬಳ್ಳಾರಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಿಂದ ಪ್ರಕರಣ ಬೆಳಕಿಗ ಬಂದಿದೆ. ಇನ್ನು ಈ ಪ್ರಕರಣ ಸಂಬಂಧ ಈಗಾಗಲೇ ಇವರಿಗೆ ಸಹಾಯ ಮಾಡಿದ ಕೆಲ ಸ್ಥಳೀಯರು ಹಾಗೂ ತಹಶೀಲ್ದಾರ್ ಕಛೇರಿಯ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಹಿರೇಹಡಗಲಿ, ಬಳ್ಳಾರಿ ಗ್ರಾಮೀಣ, ಗಾಂಧಿನಗರ, ಹಾಗೂ ಎಪಿಎಂಸಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ವಾಮ ಮಾರ್ಗದಲ್ಲಿ ಸೇನೆಗೆ ಸೇರಲು ಮುಂದಾದವರು, ಈಗ ಕೃಷ್ಣನ ಜನ್ಮಸ್ಥಳಕ್ಕೆ ಹೋಗಿದ್ದಾರೆ.