ಸವದತ್ತಿಯ ಹರ್ಷ ಶುಗರ್ಸ ಮತ್ತು ಬೆಳವಡಿಯ ಸೋಮೇಶ್ವರ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿ ನೇಗಿಲಯೋಗಿ ರೈತ ಸೇವಾ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬುಧವಾರ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನೇಗಿಲಯೋಗಿ ರೈತ ಸೇವಾ ಸಂಘದ ಪದಾಧಿಕಾರಿಗಳು ಹರ್ಷ ಶುಗರ್ಸ ಮತ್ತು ಬೆಳವಡಿಯ ಸೋಮೇಶ್ವರ ಸಕ್ಕರೆ ಕಾರ್ಖಾನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ್ ಎಲ್ಲ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯಲ್ಲಿರುವ ಕಬ್ಬಿಗೆ ಮೊದಲು ಆಧ್ಯತೆ ಕೊಡಬೇಕು. ರೈತರು ಬರೆದು ಕೊಟ್ಟ ಬ್ಯಾಂಕುಗಳಿಗೆ ಕಬ್ಬಿನ ಬಿಲ್ ಸಂದಾಯ ಮಾಡಬೇಕು. ಕಬ್ಬು ಕಟಾವು ಹಾಗೂ ಸಾಗಾಣಿಕೆದಾರರು ಮುಗ್ದ ರೈತರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ಹಣ ಸುಲಿಗೆ ಮಾಡುತ್ತಿರುವ ಗ್ಯಾಂಗ್ ಮತ್ತು ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಕಬ್ಬನ್ನು ತಕ್ಷಣವೇ ಕಟಾವ್ ಮಾಡಿ, ಯಾವುದೇ ಕಡಿತ ಇಲ್ಲದೇ ಬಿಲ್ ಸಂದಾಯ ಮಾಡಬೇಕು. ಕಾನೂನಿನ ಪ್ರಕಾರ 14 ದಿನಗಳ ಒಳಗೆ ಬಿಲ್ ರೈತರ ಖಾತೆಗಳಿಗೆ ಜಮಾ ಮಾಡಬೇಕು ಇಲ್ಲದಿದ್ರೆ ಶೇ.50ರಷ್ಟು ಬಡ್ಡಿ ಹಣವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೇಗಿಲಯೋಗಿ ರೈತ ಸೇವಾ ಸಂಘದ ಬಸವರಾಜ್ ಮೊಖಾಶಿ, ರೈತ ಮುಖಂಡರಾದ ಚನಬಸಗೌಡ ಪಾಟೀಲ್, ವೀರಭದ್ರಪ್ಪ ನಾಯ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.