ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ನೀರು ಸರಬರಾಜು ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ.

ಹೌದು ಕಳೆದ 15 ವರ್ಷಗಳಿಂದ ಬೆಳಗಾವಿಯ ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲ್‍ಮನ್‍ಗಳು, ಡಾಟಾ ಎಂಟ್ರಿ ಕಂಪ್ಯೂಟರ್ ಆಪರೇಟರ್ಸ, ಕ್ಲರ್ಕಗಳು ಸೇರಿದಂತೆ ಇನ್ನಿತರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಆಕ್ರೋಶಗೊಂಡಿರುವ ಇವರು ಸೋಮವಾರ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸುನಿತಾ ಭೋವಿ ನಾವು 15 ವರ್ಷಗಳಿಂದ ನೀರು ಸರಬರಾಜು ಮಂಡಳಿಯಲ್ಲಿ 800 ರೂಪಾಯಿ ವೇತನದಿಂದ ಕೆಲಸ ಮಾಡುತ್ತಿದ್ದೇನೆ. ನಮಗೆ ಸೇವಾ ಭದ್ರತೆಯನ್ನು ಈವರೆಗೂ ಕೊಟ್ಟಿಲ್ಲ.
ಜಲಮಂಡಳಿಯವರು ಇಷ್ಟು ದಿನ ನಮಗೆ ಕೆಲಸ ಕೊಟ್ಟಿದ್ದರು. ಈಗ ಎಲ್ ಆಂಡ್ ಟಿ ಕಂಪನಿಗೆ ಕೊಟ್ಟಿದ್ದಾರೆ. ಎರಡು ವರ್ಷ ಬಾಂಡ್ ಆಗಿದೆ. ಇದರಲ್ಲಿ ಆರು ತಿಂಗಳು ಮುಗಿಯುತ್ತಾ ಬಂದಿದೆ. ಕಮಿಷನರ್ ಸಾಹೇಬರು ನಿಮಗೆ ಸೇವಾ ಭದ್ರತೆ, ಕನಿಷ್ಠ ವೇತನ ನಿಗದಿ ಪಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ನಿರಂತರವಾಗಿ ನಾವು ಮನವಿ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ಡಿಸಿ ಸಾಹೇಬರು, ಪಾಲಿಕೆ ಆಯುಕ್ತರು ನಮಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಇಲ್ಲದಿದ್ರೆ ನಗರದಲ್ಲಿ ನೀರು ಬಿಡುವುದನ್ನು ನಿಲ್ಲಿಸಿ ನಾವು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿಯ ವಾಲ್‍ಮನ್‍ಗಳ ಸಮಸ್ಯೆಯನ್ನು ಜಿಲ್ಲಾಡಳಿತ ಯಾವ ರೀತಿ ಪರಿಹರಿಸುತ್ತದೆ ಎಂದು ಕಾಯ್ದು ನೋಡಬೇಕಿದೆ.