ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳನ್ನು ಮಕ್ಕಳಿಗೆ ಶರವೇಗದಲ್ಲಿ ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಶ್ರೀಗುರುಸಿದ್ಧ ಸ್ವಾಮಿಜೀ ಹುಸಿಕೊಳ್ಳಮಠ ಸಭಾ ಭವನದಲ್ಲಿ ನಡೆದ ಅರಿವಿನ ತಾಯಿಗೆ ನಮನ ಸಾವಿತ್ರಿಬಾಯಿ ಫುಲೆ ಜಯಂತೋತ್ಸವ ಮತ್ತು ಭೀಮಾ ಕೋರೆಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿಟ್ಟ ಮಹಿಳೆಯಾದ ಸಾವಿತ್ರಿಬಾಯಿ ಫುಲೆ ಜನಿಸದೇ ಇದ್ದಿದ್ದರೆ ಮಹಿಳೆಯರು ಶಿಕ್ಷಣ ಪಡೆಯಲು ವಿಳಂಬವಾಗುತ್ತಿತ್ತು. ಅವರ ಹೋರಾಟದಿಂದ ಈಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಬಂದಿದ್ದಾರೆ. ಸಾವಿತ್ರಿಬಾಯಿ ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರು ಇಡೀ ಭಾರತದ ನಾಯಕಿ’ ಎಂದು ಸ್ಮರಿಸಿದರು.
ಸಾವಿತ್ರಿಬಾಯಿ ಫುಲೆ, ಭೀಮಾ ಕೋರೆಗಾಂವ ಹೋರಾಟ ಮತ್ತು ಬುದ್ದ, ಬಸವ, ಅಂಬೇಡ್ಕರ್ ಅವರ ಹೋರಾಟವನ್ನು ನಿಮಗೆಲ್ಲಾ ತಿಳಿಸುವ ಪ್ರಯತ್ನವನ್ನು ಈ ವೇದಿಕೆಯಿಂದ ಮಾಡಿದ್ದಾರೆ. ನಾವೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತ ಸಂವಿಧಾನವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಮನುವಾದಿಗಳ ವಿರುದ್ಧ ಹೋರಾಡಬೇಕು ಎಂದು ತಿಳಿಸಿದರು.
ದೇಶದಲ್ಲಿ ಜಾತಿ ಎಂಬ ಪಿಡುಗು ತಾಂಡವಾಡುತ್ತಿದೆ. ಮಹಾಪುರುಷರ ಜಯಂತಿಗಳು ಜಾತಿಗೆ ಸೀಮಿತವಾಗುತ್ತಿವೆ. ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲರೂ, ದೇಶಕ್ಕಾಗಿ ಹೋರಾಡಿದ ಮಹಾಪುರುಷರ ಜಯಂತಿಯನ್ನು ಆಚರಿಸಬೇಕು’ ಎಂದು ಹೇಳಿದರು.
ಜೇವರ್ಗಿಯ ಗುರುಪೀಠ ಚಿಗರಹಳ್ಳಿಯ ಸಿದ್ದಬಸವ ಕಭೀರ ಸ್ವಾಮೀಜಿ ಶ್ರೀ ಜಗದ್ಗುರು ಮರಳುಶಂಕರ ದೇವರ ಮಾತನಾಡಿ , ಸಾವಿತ್ರಿ ಬಾಯಿ ಫುಲೆ ತಾನು ಕಣ್ಣೀರು ಹಾಕಿ ಈಗಿನ ಮಹಿಳೆಯರಿಗೆ ಸುಃಖ ನೀಡಿದಂತ ದಿಟ್ಟ ಮಹಿಳೆ. ಅಕ್ಷರ ಜ್ಞಾನವನ್ನು ಕೊಟ್ಟ ಮಹಿಳೆಯಾಗಿದ್ದಾರೆ. ಅವರ ಹೋರಾಟದ ಪ್ರತಿಫಲವೇ ಈಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಪಾದಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕಲಬುರಗಿಯ ಖ್ಯಾತ ಬರಹಗಾರ ವಿಠ್ಠಲ ವಗ್ಗನವರ ಮಾತನಾಡಿ, 224 ಶಾಸಕರು, ಸಚಿವರು ಇದ್ದಾರೆ. ಕಳೆದ ೩೦ ವರ್ಷಗಳು ಸುದೀರ್ಘ ಸಮಾಜಿಕ, ಸಾಹಿತ್ಯಿಕ , ಸಾಂಸ್ಕೃತಿಕ ಹಾಗೂ ಶಿಕ್ಷಣ, ಕ್ರೀಡೆ ಸೇರಿ ಎಲ್ಲ ಸಮಾಜ ಮುಖಿ ಕಾರ್ಯಗಳಿಂದ ಸತೀಶ ಜಾರಕಿಹೊಳಿ ಅವರು ಚರಿತ್ರೆ ಪುಟ ಸೇರುತ್ತಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಉಮೇಶ್ ಬೀಮಗೋಳ, ಪರಶುರಾಮ ತಳವಾರ, ಅಶೋಕ ತಳವಾರ, ಗಣಪತಿ ಕಾಂಬಳೆ, ಪ್ರಕಾಶ ಕೋಣಿ, ಆಕ್ಷಯ ವೀರಮುಖ್, ಬಾಳು ಕೋಣಿ, ಗುಲಾಬ ಸಿಂಗ್ ರಜಪೂತ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.