Belagavi

ಸರ್ಕಾರಿ ನೌಕರರಿಗೆ ಬ್ಲ್ಯಾಕ್‍ಮೇಲ್ ಕೇಸ್: ದೂರು ನೀಡಿದ್ರೆ ಕ್ರಮ ಖಚಿತ: ಡಿಸಿ ಎಂ.ಜಿ.ಹಿರೇಮಠ

Share

ಸರ್ಕಾರಿ ನೌಕರರ ಮೇಲೆ ಯಾರೇ ಬ್ಲ್ಯಾಕ್‍ಮೇಲ್ ಮಾಡಿದ್ರೂ ಅವರ ವಿರುದ್ಧ ನೌಕರರು ದೂರು ದಾಖಲಿಸಿದ್ರೆ ಕಾನೂನು ಕ್ರಮ ಕೈಗೊಳ್ಳುವಂತೆ ಡಿಸಿ ಮಹಾಂತೇಶ ಹಿರೇಮಠ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಳಗಾವಿ ಜಿಲ್ಲಾ ಶಾಖೆಯ ಎರಡನೇ ಜಂಟಿ ಸಮಾಲೋಚನಾ ಸಮಿತಿ ಸಭೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ಮಹಾಂತೇಶ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲ್ ಮಾತನಾಡಿ ವೈದ್ಯಕೀಯ ವೆಚ್ಛ ಮರುಪಾವತಿ ಬಿಲ್‍ಗಳು ವಿಳಂಬವಾಗುತ್ತಿದ್ದು, ಇದರಿಂದ ಈಗಾಗಲೇ ಚಿಕಿತ್ಸೆ ಪಡೆದ ನೌಕರರಿಗೆ ತೊಂದರೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಹೊಸದಾಗಿ ಜಿಲ್ಲಾ ಪಂಚಾಯತಿ ವತಿಯಿಂದ ಕಮೀಟಿ ರಚನೆ ಮಾಡಲಾಗಿದ್ದು, ಇದರಿಂದ ಬಿಲ್‍ಗಳು ವಿಳಂಬವಾಗುತ್ತಿವೆ. ಆದ್ದರಿಂದ ಈ ಕಮೀಟಿಯನ್ನು ರದ್ದು ಮಾಡಬೇಕು ಎಂದರು. ಅದೇ ರೀತಿ ಬಹುತೇಕ ಕಚೇರಿಗಳಲ್ಲಿ ಯೋಗ್ಯವಾದ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳು ಸರಿಯಾಗಿ ಇರುವುದಿಲ್ಲ. ಹೀಗಾಗಿ ಎಲ್ಲಾ ಕಚೇರಿಗಳಲ್ಲಿ ಸುಸಜ್ಜಿತವಾದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅದೇ ರೀತಿ ಮಹಿಳಾ ನೌಕರರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಇಲಾಖೆಗಳಲ್ಲಿ ಮಹಿಳಾ ನೌಕರರಿಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ ಮಾಡಿಕೊಡಬೇಕು ಎಂದರು. ಇದಕ್ಕೆ ಉತ್ತರಿಸಿದ ಡಿಸಿ ಮಹಾಂತೇಶ ಹಿರೇಮಠ ಅವರು ನಿಮ್ಮ ಬೇಡಿಕೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದರು.

ಇನ್ನು ಅನ್ಯಾಯಕ್ಕೆ ಒಳಗಾದ ಮಹಿಳಾ ನೌಕರರು ದೂರು ಸಲ್ಲಿಸಲು ಅನುಕೂಲವಾಗುವ ದೃಷ್ಟಿಯಿಂದ ನೌಕರರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಬೇಕು ಎಂಬ ಬಗ್ಗೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಎಷ್ಟು ದಿನ ಅಂತಾ ನೀವು ಸಹಿಸಿಕೊಳ್ಳುತ್ತಿರಿ. ನಿಮಗೆ ಯಾರಾದ್ರೂ ಬ್ಲ್ಯಾಕ್‍ಮೇಲ್ ಮಾಡಿದ್ರೆ ಸಂಬಂಧಿಸಿ ಠಾಣೆಗಳಲ್ಲಿ ತಾವು ದೂರು ಸಲ್ಲಿಸಿದ್ರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಆರ್ ಎಸ್‍ಪಿ ಕಾಶಪ್ಪನವರ, ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕೋಲಕಾರ್, ಖಜಾಂಚಿ ಶ್ರವಣ ರಾಣವ್ವಗೋಳ, ಪದಾಧಿಕಾರಿಗಳಾದ ಲಗಮನ್ನಾ ಪಂಗನ್ನವರ, ಬಸವರಾಜ್ ರಾಯವ್ವಗೋಳ, ಮಂಜುನಾಥ ಬಿಸನಳ್ಳಿ, ಎನ್.ಎಸ್.ಪಾಟೀಲ್, ರಾಜೇಂದ್ರ ಮಹೇಂದ್ರಕರ್, ರವಿ ಪರವಿನಾಯಕ್, ಶ್ರೀಧರ ಸರದಾರ್, ಅಂಜನಾ ಮುರಗೋಡ, ಬಿ.ಎಸ್.ನಾರಾಯಣಪುರ, ಅಶೋಕ್ ಗೌಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!