ನಿನ್ನೆ ರಾತ್ರಿ ಸರಿಯಾಗಿ 12 ಗಂಟೆಗೆ ಕ್ಯಾಲೆಂಡರ್ ಹೊಸ ವರ್ಷ ಆಗಮಿಸಿದೆ. ಕಳೆದ ಬಾರಿ ಕೊರೊನಾ ಆತಂಕದಿಂದ ಹೊಸ ವರ್ಷ ಸಪ್ಪೆಯಾಗಿತ್ತು. ಈ ಬಾರಿಯೂ ಓಮಿಕ್ರಾನ್ ಹಾವಳಿ ಯಿಂದ ಸರಕಾರದ ಬಿಗಿ ಕ್ರಮಗಳಿಂದ ಸಪ್ಪೆಯಾಗಿದೆ. ಕೆಲವರು ಮನೆಯಲ್ಲೇ ಹೊಸ ವರ್ಷ ಆಚರಿಸಿದರೆ, ಕೆಲವರು ಹೊಲಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ರಾತ್ರಿಯಿಡೀ ಸಂಭ್ರಮಿಸುತ್ತಿದ್ದ ಜನತೆ ನೈಟ್ ಕರ್ಫ್ಯೂ ಭಯದಿಂದ ಬೇಗನೆ ಮನೆ ಸೇರಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹೌದು… ವಿಜಯಪುರ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿತ್ತು. ಈ ವರ್ಷ ಹೊಸವರ್ಷಾಚರಣೆಗೆ ಕೋವಿಡ್ ಹಾಗೂ ಓಮಿಕ್ರಾನ್ ಹಾವಳಿ ಹಿನ್ನೆಲೆಯಲ್ಲಿ ಸರ್ಕಾರ ಬ್ರೇಕ್ ಹಾಕಿದೆ. ಪ್ರತಿ ವರ್ಷವು ಬಾಣ ಬಿರುಸುಗಳ ಮೂಲಕ ಹಾಗೂ ಸಂಗೀತ ರಸಸಂಜೆ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೊರಲಾಗ್ತಿತ್ತು. ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಬಾಣ ಬಿರುಸುಗಳಿಂದ ಸಂಭ್ರಮಿಸಲಾಗುತ್ತಿತ್ತು. ಆದ್ರೆ ಗುಮ್ಮಟನಗರಿ ಆದರೆ ಈ ಬಾರಿ ರಾತ್ರಿ 10 ಗಂಟೆಗೆ ಎಲ್ಲಾ ಆಚರಣೆಗಳು ಕ್ಲೋಸ್ ಆಗಿದ್ದವು. 10 ಗಂಟೆಗೆ ಸಂಪೂರ್ಣ ವಿಜಯಪುರ ಸ್ತಬ್ಧವಾಗಿತ್ತು. 2021ಕ್ಕೆ ವಿದಾಯ ಹೇಳಿ ಹೊಸ ವರ್ಷ 2022ನ್ನು ಸಾರಾಯಿ ಸೀಸೆಯ ನಶೆಯಲ್ಲೇ ಸ್ವಾಗತ ಕೋರಲು ಮದ್ಯಪ್ರಿಯರು ಸಜ್ಜಾಗುತ್ತಿದ್ದರು. ಆದ್ರೆ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ರಾತ್ರಿ ಕರ್ಫ್ಯೂ ಸೇರಿದಂತೆ ವಿವಿಧ ಷರತ್ತುಗಳು ಮದ್ಯಾರಾಧನೆಗೆ ಅಡ್ಡಿಯಾದವು. ರಾತ್ರಿ 10 ಗಂಟೆಗೆ ಮುಖ್ಯವಾಗಿ ಹೊಟೇಲ್ ಗಳು, ಮದ್ಯದ ಮಳಿಗೆ, ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಮುಚ್ಚಿದ್ದವು. ಇನ್ನೂ ವಿಜಯಪುರ ನಗರದ ಸ್ಪೂರ್ತಿ ರೆಸಾರ್ಟ್ ನಲ್ಲಿ ಸಂಗೀತ ಸಂಜೆ ಆಯೋಜಿಸಿ ಸಂಜೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ9.30 ಕ್ಕೆ ಮುಕ್ತಾಯಗೊಳಿಸಲಾಯಿತು. ಸಾಗರ ಬಾಗಲಕೋಟ ತಂಡದ ಮನರಂಜನೆಗೆ ಗಾಯನಸುಧೆಗೆ ಸ್ಟೆಪ್ ಹಾಕಿದರು.
ಇನ್ನೂ ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯ ನಗರ, ಪಟ್ಟಣಗಳ ಬೇಕರಿಗಳಲ್ಲಿಕೇಕ್ ಮಾರಾಟ ಭರಾಟೆ ಜೋರಾಗಿತ್ತು. ಕುಟುಂಬ ಸದಸ್ಯರು, ಸ್ನೇಹಿತರು ಯೋಜನೆ ರೂಪಿಸಿದಂತೆ ಬೇಕರಿಗಳಿಗೆ ಮೊದಲೇ ವಿವಿಧ ಬಗೆಯ ಕೇಕ್‌ಗಳ ಸಿದ್ಧಪಡಿಸಲು ಬೇಡಿಕೆ ಸಲ್ಲಿಸಿದ್ದರು. ಎಗ್‌ಲೆಸ್ ಕೇಕ್, ಪೈನಾಪಲ್, ಸ್ಟ್ರಾಬೆರಿ ಪೇಸ್ಟ್ರೀ, ಕಪ್ ಕೇಕ್‌ಗಳಿಗೂ ಈ ಬಾರಿ ಬೇಡಿಕೆ ಇತ್ತು. ಕೆಲವರು ಬ್ಲ್ಯಾಕ್ ಫಾರೆಸ್ಟ್, ಐರಿಶ್ ಕಾಫಿಯಂತಹ ದುಬಾರಿ ಕೇಕ್ ಖರೀದಿಸಿ ಮನೆಯಲ್ಲೇ ಕೇಕ್ ಕತ್ತರಿಸಿದರು. ಇನ್ನೂ ಕೆಲ ಸಂಪ್ರದಾಯವಾದಿಗಳು ಕ್ಯಾಲೆಂಡರ್ ವರ್ಷ ಮಾತ್ರ ಪರಿಗಣಿಸಿ ನಾವು ಯುಗಾದಿ ಆಚರಿಸುತ್ತೇವೆ ಎಂದರು.
ಒಟ್ನಲ್ಲಿ ಓಮಿಕ್ರಾನ್ ಹಾವಳಿ, ಸರಕಾರದ ಕಠಿಣ ನಿಯಮಗಳಿಂದ ಹೊಸ ವರ್ಷವನ್ನು ಗುಮ್ಮಟನಗರಿ ಜನತೆ ಸರಳವಾಗಿ ಬರಮಾಡಿಕೊಂಡು ಹಳೆಯ ವರ್ಷಕ್ಕೆ ವಿದಾಯ ಹೇಳೊ ಮೂಲಕ ಬಿಳ್ಕೊಟ್ಟರು.