ಶಾರ್ಟ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿ ಸುಮಾರು 4 ಎಕರೆ ಹೊಲದಲ್ಲಿ ಬೆಳೆದಿದ್ದ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಹೌದು ಸುಮಾರು 11 ತಿಂಗಳು ಕಷ್ಟ ಪಟ್ಟು ಬೆಳೆದಿದ್ದ ಕಬ್ಬು ಎದೆ ಎತ್ತರಕ್ಕೆ ಬಂದು ನಿಂತಿತ್ತು. ಇನ್ನೇನು ಕಬ್ಬು ಕಡಿಸಿ, ಫ್ಯಾಕ್ಟರಿಗೆ ಕಳಿಸಿದ್ರೆ ಒಳ್ಳೆಯ ಆದಾಯ ಬರುತ್ತದೆ ಎಂದು ನಿರೀಕ್ಷೆಯಲ್ಲಿದ್ದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ರವಿವಾರ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು 4 ಎಕರೆ 8 ಗುಂಟೆ ಹೊಲದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ರೈತ ಬಸಪ್ಪ ಕಾಶಪ್ಪ ಲಾಳ ಅವರಿಗೆ ಸೇರಿದ ಭೂಮಿ ಇದಾಗಿದ್ದು. ಸುಮಾರು 7 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ ಸುಮಾರು 280 ಟನ್ ಕಬ್ಬು ನಾಶವಾಗಿದೆ. ಅದೇ ರೀತಿ 50 ಸಾವಿರ ರೂಪಾಯಿ ಮೌಲ್ಯದ 40 ಪಿವ್ಹಿಸಿ ಪೈಪ್‍ಗಳು ಕೂಡ ಸುಟ್ಟು ಹೋಗಿವೆ. ಬೆಂಕಿಯನ್ನು ನಂದಿಸಲು ಅಕ್ಕಪಕ್ಕದ ರೈತರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಇನ್ನು ಈ ಸಂಬಂಧ ತಮ್ಮ ಅಳಲು ತೋಡಿಕೊಂಡಿರುವ ನೊಂದ ರೈತ, ನ್ಯಾಯವಾದಿ ಉಮೇಶ ಲಾಳ ನಮ್ಮ ತಂದೆಯವರು 4 ಎಕರೆ 8 ಗುಂಟೆ ಹೊಲದಲ್ಲಿ ಕಷ್ಟ ಪಟ್ಟು ಕಬ್ಬು ಬೆಳೆದಿದ್ದರು. ಆದರೆ ಈ ರೀತಿ ವಿದ್ಯುತ್ ಅವಘಡದಿಂದ ಕಬ್ಬು ಸಂಪೂರ್ಣವಾಗಿ ಹಾನಿಗೆ ಒಳಗಾಗಿದೆ. ಒಟ್ಟು 8 ಲಕ್ಷ ರೂಪಾಯಿಗೂ ಹೆಚ್ಚು ಹಾನಿಯಾಗಿದೆ. ಕೂಡಲೇ ಸರ್ಕಾರ ನಮಗೆ ಸೂಕ್ತ ಪರಿಹಾರ ಕೊಡಬೇಕು. ಇಂತಹ ದುರ್ಘಟನೆಗಳು ಮರುಕಳಿಸದಂತೆ ಕೆಇಬಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದ್ದು. ಸರ್ಕಾರ ಸೂಕ್ತ ಪರಿಹಾರ ನೀಡಿ, ಅನ್ನದಾತರನ್ನು ಬದುಕಿಸುವಂತೆ ರೈತರು ಒತ್ತಾಯಿಸಿದ್ದಾರೆ.