ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ನಿಜವಾಗಲೂ ಪ್ರತಿ ತಾಲೂಕಿನಲ್ಲಿ ಏನಾಗಿದೆ ಎಂಬ ಕುರಿತು ತಿಳಿದುಕೊಳ್ಳಲು ಡಿಸಿಗಳು, ಡಿಡಿಪಿಐಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ ಸಭೆ ಮಾಡುತ್ತಿದ್ದೇವೆ. ಗ್ರೌಂಡ್ ರಿಯಾಲಿಟಿ ಅರ್ಥ ಮಾಡಿಕೊಂಡು ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಕಡೆ ಶಾಲೆಗಳನ್ನು ಮುಂದುವರಿಸಲು ನಿರ್ಧರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬಿ.ಸಿ.ನಾಗೇಶ್ ಕೊರೊನಾ ಪ್ರತಿದಿನ ಹೆಚ್ಚಾಗುತ್ತಿದೆ ಹೀಗಾಗಿ ನಿನ್ನೆ ಸಿಎಂ ಅವರು ಕೂಡ ಒಂದು ಸಭೆ ನಡೆಸಿದ್ದಾರೆ. ಸಭೆಯಲ್ಲಿ ತಾಲೂಕು ಮಟ್ಟದಲ್ಲಿ ಪಾಸಿಟಿವಿಟಿ ರೇಟ್ ನೋಡಿಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಶಿಕ್ಷಣದಷ್ಟೇ ಮಕ್ಕಳ ಆರೋಗ್ಯ ಮುಖ್ಯ. ಯಾವುದೇ ಕಾರಣಕ್ಕೂ ಕೊರೊನಾ ಕಾರಣದಿಂದ ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಒಂದೂವರೆ ವರ್ಷದಲ್ಲಿ ಶಾಲೆಗಳು ಬಂದ್ ಆಗಿದ್ದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ತುಂಬಾ ಪರಿಣಾಮ ಬೀರಿದೆ. ಹೀಗಾಗಿ ಕಳೆದ ನಾಲ್ಕೈದು ತಿಂಗಳಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಮಕ್ಕಳನ್ನು ಒಂದು ಹಂತಕ್ಕೆ ಕಲಿಕೆಯಲ್ಲಿ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಈ ಬಾರಿ ಶಾಲೆಗಳನ್ನು ಆದಷ್ಟು ನಡೆಸುವ ಉದ್ದೇಶವಿದೆ. ಆದರೆ ಮಕ್ಕಳ ಮೇಲೆ ಯಾವುದೇ ರೀತಿ ಪರಿಣಾಮ ಬೀರಬಾರದು. ಶಾಲೆಗಳನ್ನು ಜೋಪಾನವಾಗಿ ನಡೆಸಬೇಕು ಎಂದು ಸಿಎಂ ಅವರು ಸ್ಪಷ್ಟವಾದ ಎಚ್ಚರಿಕೆ ಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ ಕಳೆದ ಕೊರೊನಾ ಮೊದಲ ಮತ್ತು ಎರಡನೇ ಅಲೆ ಹಾಗೂ ಇತ್ತಿಚಿನ ದಿನಗಳ ತಾಲೂಕುವಾರು ಪಾಸಿಟಿವ್ ರೇಟ್ ಪರಿಶೀಲನೆ ನಡೆಸಿದಾಗ 117 ತಾಲೂಕುಗಳಲ್ಲಿ ಶೇ.1ರಷ್ಟು ಪಾಸಿಟಿವಿಟಿಗಿಂತ ಕಡಿಮೆಯಿದೆ. ಅದೇ ರೀತಿ 12 ತಾಲೂಕುಗಳಲ್ಲಿ ಸೊನ್ನೆ ರೇಟ್ ಇದೆ. ಸುಮಾರು 34 ತಾಲೂಕುಗಳಲ್ಲಿ 1ರಿಂದ 2ರಷ್ಟು ಪಾಸಿಟಿವಿಟಿ ರೇಟ್ ಇದೆ. ಆದ್ದರಿಂದ ತಾಲೂಕು ಮಟ್ಟವನ್ನು ಪರಿಗಣಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎನ್ನುವ ಅವಶ್ಯಕತೆ ಬಿದ್ರೆ ಮಾತ್ರ ಶಾಲೆಗಳನ್ನು ಬಂದ್ ಮಾಡುವ ನಿರ್ಣಯವನ್ನು ಮುಖ್ಯಮಂತ್ರಿಗಳು ಆಯಾ ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದಾರೆ ಎಂದರು.