Chamarajanagara

ವಿಧಾನಸೌಧದಲ್ಲಿ ಬಂದು ಕೂತಿರುವ ರಾಕ್ಷಸರನ್ನು ಓಡಿಸಬೇಕು: ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

Share

ಅಣ್ಣಾಮಲೈ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್ ಕೊಡ್ತಾ ಇಲ್ಲ, ಅಣ್ಣಾಮಲೈ ಅಲ್ಲಿನ ಬಿಜೆಪಿ ಅಧ್ಯಕ್ಷನಾಗಿದ್ದಾನೆ. ತಮಿಳುನಾಡಿನ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಿಟಿ ರವಿನೇ ಅಣ್ಣಾಮಲೈನನ್ನು ಎತ್ತಿಕಟ್ಟುತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಚಾಮರಾಜನಗರದಲ್ಲಿ ಮೇಕೆದಾಟು ಪಾದಯಾತ್ರೆಗೆ ಹಮ್ಮಿಕೊಂಡಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಕೆದಾಟು ಯೋಜನೆಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಗಬೇಕು ಅμÉ್ಟೀ. 200 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ಅಣ್ಣಾಮಲೈ ಮೇಕೆದಾಟು ಯೋಜನೆ ಆಗಬಾರದು ಎಂದು ಧರಣಿ ಮಾಡ್ತಾನೆ. ಸಿಟಿ ರವಿನಾ ಲೂಟಿ ರವಿ ಅಂತನೂ ಕರೀತಾರೆ. ಇದೇ ಸಿಟಿ ರವಿ ಅಣ್ಣಾಮಲೈನನ್ನು ಎತ್ತಿಕಟ್ಟುತ್ತಿದ್ದಾನೆ. ಚಾಮರಾಜನಗರದಿಂದ ಪಾದಯಾತ್ರೆಗೆ ಮನೆಗೊಂದು ಆಳು ಬರಬೇಕು, ಕನಿಷ್ಠ 10 ಸಾವಿರ ಜನ ಬರಬೇಕು ಎಂದು ಕರೆ ನೀಡಿದರು.

ಇನ್ನು ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇದೆ. ವಿಧಾನಸೌಧದಲ್ಲಿ ರಾಕ್ಷಸರು ಬಂದು ಕೂತಿದ್ದಾರೆ, ಜನರ ರಕ್ತ ಕುಡಿತಾ ಇದ್ದಾರೆ. ಬಿಜೆಪಿಯಂತಹ ನೀಚರು. ಭ್ರಷ್ಟರು, ಯಾವ ಕಾಲದಲ್ಲೂ ಬಂದಿಲ್ಲ. ಕೆಂಗಲ್ ಹನುಮಂತಯ್ಯ ಸರ್ಕಾರದ ಕೆಲಸ ದೇವರ ಕೆಲಸ ಎಂದಿದ್ರು. ಆದ್ರೆ ಅವರು ಕಟ್ಟಿದ ವಿಧಾನಸೌಧದಲ್ಲಿ ರಾಕ್ಷಸರು ಬಂದು ಕೂತಿದ್ದಾರೆ, ಅವರನ್ನ ಓಡಿಸಬೇಕು. ಅದಕ್ಕಾಗಿ ನೀವು ಮುಂದಿನ ಚುನಾವಣೆಗಾಗಿ ಕಾಯಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಚಾಮರಾಜನಗರಕ್ಕೆ ಬಂದ ಮೇಲೆ ನನ್ನ ಸಿಎಂ ಸ್ಥಾನ ಗಟ್ಟಿಯಾಗಿತ್ತು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಶಾಪ ಹುಟ್ಟು ಹಾಕಿದ್ದರು, ಆದರೆ ನಾನು 10 ರಿಂದ 12 ಬಾರಿ ಬಂದಿದ್ದೆ. ಜೆಎಚ್ ಪಟೇಲರಂತವರು ಸಹ ಮೌಢ್ಯಕ್ಕೆ ಜೋತು ಬಿದ್ದು ಬರಲಿಲ್ಲ, ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟಿಸಿದ್ದರು. ಆಕ್ಸಿಜನ್ ಕೊರತೆಯಿಂದ ಮೂರೇ ಜನ ಮೃತರಾಗಿದ್ದಾರೆ ಎಂದು ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್, ಜಿಲ್ಲಾ ಸಚಿವ ಸುರೇಶ ಕುಮಾರ್ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದರು. ಆದರೆ 36 ಜನ ಸತ್ತಿದ್ದಾರೆ ಎಂದು ಅಧಿಕಾರಿಗಳೇ ನಮ್ಮ ಮುಂದೆ ಒಪ್ಪಿಕೊಂಡಿದ್ದರು. 36 ಜನರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಸಚಿವ ಸುಧಾಕರ್ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಿ ಜನದ್ರೋಹ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಒಟ್ಟಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮಾಡಿದ್ದು ಈ ವೇಳೆ ಕಂಡು ಬಂತು.

 

Tags:

error: Content is protected !!