ಸರ್ಕಾರ ಕೋವಿಡ್ ಹಾಗೂ ಓಮೈಕ್ರಾನ್ ಸೊಂಕು ಹರಡುವುದನ್ನು ತಡೆಯಲು ವಾರಾಂತ್ಯದ ಕರ್ಫೂ ವಿಧಿಸಿದೆ. ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ಕರ್ಫ್ಯೂಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ.

ಇದರ ನಡುವೆ ಮಹಾನಗರ ಪಾಲಿಕೆ ವಾರಾಂತ್ಯದ ಕರ್ಫ್ಯೂ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಯುದ್ಧೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಮುಖ್ಯವಾಗಿ ಹುಬ್ಬಳ್ಳಿಯಲ್ಲಿ ವಾಹನ ದಟ್ಟಣೆ ಹೆಚ್ಚು. ರಸ್ತೆ ಗುಂಡಿಗಳ ದುರಸ್ತಿ, ಯುಜಿಡಿ, ಸಿ.ಸಿ.ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ವಾಹನ ದಟ್ಟಣೆಯಿಂದ ತೊಂದರೆಯಾಗುತ್ತದೆ. ಶನಿವಾರ ಹಾಗೂ ಭಾನುವಾರ ಕರ್ಫ್ಯೂ ಇರುವುದರಿಂದ ವಾಹನ ಸಂಚಾರ ವಿರಳವಾಗಿರುತ್ತದೆ. ಈ ವೇಳೆಯ ಸದುಪಯೋಗ ಪಡೆದುಕೊಳ್ಳಲು ಚಿಂತಿಸಿದ ಪಾಲಿಕೆ ಅಧಿಕಾರಿಗಳು, ಸಕಲ ಪೂರ್ವ ತಯಾರಿಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.
ವಲಯ 6 ವ್ಯಾಪ್ತಿಯಲ್ಲಿ ಬರುವ ಬೆಂಗೇರಿ, ಗೊಪ್ಪನಕೊಪ್ಪ, ಕೇಶ್ವಾಪುರ, ಅರಳಿಕಟ್ಟೆ, ನಾಗಶೆಟ್ಟಿಕೊಪ್ಪ ಏರಿಯಾಗಳಲ್ಲಿ 46 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ತುಂಬಿ, ಟಾರ್ ಹಾಕುವ ಕೆಲಸವನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಹುಬ್ಬಳ್ಳಿ ನಗರದ ರಿಲಯನ್ಸ್ ಫ್ರೆಶ್ ಹಿಂಬದಿಯ ವಾರ್ಡ ನಂಬರ್ 31 ರಲ್ಲಿ, 34 ಲಕ್ಷ ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿ ಸಿದ್ದತೆಯ ಕಾರ್ಯವು ಭರದಿಂದ ಸಾಗಿದೆ. ಹೀಗೆ ಅವಳಿ ನಗರ ಹಲವು ಕಡೆ ಪಾಲಿಕೆಯಿಂದ ಯು.ಜಿ.ಡಿ.ಗೆ ಪೈಪ್ ಲೈನ್ ಅಳವಡಿಕೆ, ಸಿ.ಸಿ.ರಸ್ತೆ ನಿರ್ಮಾಣ ಕಾಮಗರಿಗಳು ಸಹ ಜರುಗುತ್ತಿವೆ. ಕರ್ಫ್ಯೂ ಹಾಗೂ ಕೋವಿಡ್ ಮಹಾಮಾರಿ ನಡುವೆಯು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರುವ ಪಾಲಿಕೆ ಅಧಿಕಾರಿಗಳ ಕಾರ್ಯ ಜನರ ಮೆಚ್ಚುಗೆಗೂ ಪಾತ್ರವಾಗಿದೆ.