ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದಲ್ಲಿ ಇಬ್ಬರು ಮಕ್ಕಳ ಸಾವು ಕೇಸ್‍ಗೆ ಸಂಬಂಧಪಟ್ಟಂತೆ ವ್ಯಾಕ್ಸಿನ್‍ನ್ನು ಹಿಮಾಚಲಪ್ರದೇಶದ ಕಸೂಲಿ ವ್ಯಾಕ್ಸಿನ್ ಸೆಂಟರ್‍ಗೆ ಕಳಿಸಿಕೊಡುತ್ತಿದ್ದೇವೆ. ಆ ವರದಿ ಮತ್ತು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.

ಯಾರೇ ನಿರ್ಲಕ್ಷ್ಯತನ ವಹಿಸಿದ್ದರೂ ಕೂಡ ಕ್ರಮ ಖಚಿತ ಎಂದು ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ ಸ್ಪಷ್ಟಪಡಿಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ ಅವರು ಜನವರಿ 12ರಂದು ಬೋಚಬಾಳ ಗ್ರಾಮದಲ್ಲಿ 21 ಮಕ್ಕಳಿಗೆ ಎಂಆರ್ ವ್ಯಾಕ್ಸಿನ್‍ನ್ನು ಮಧ್ಯಾಹ್ನ 12 ಗಂಟೆಗೆ ಕೊಡಲಾಗಿತ್ತು. ಈ ವೇಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಲ್ವರು ಮಕ್ಕಳಿಗೆ ತೊಂದರೆ ಆದ ಸಂದರ್ಭದಲ್ಲಿ ರಾಮದುರ್ಗ ಆಸ್ಪತ್ರೆಗೆ ರವಾನಿಸುವಾಗ ಅಲ್ಲಿಯೇ ಒಂದು ಮಗು ಸಾವನ್ನಪ್ಪಿತ್ತು.
ಇನ್ನುಳಿದ ಮೂವರು ಮಕ್ಕಳಲ್ಲಿ ಒಂದು ಮಗುವಿಗೆ ರಾಮದುರ್ಗದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಅದೇ ರೀತಿ ಉಳಿದ ಎರಡು ಮಕ್ಕಳನ್ನು ಬಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‍ನಲ್ಲಿ ಇಟ್ಟಿದ್ದ ಮಗು ಸಾವನ್ನಪ್ಪಿದೆ. ಬಿಮ್ಸ ಆಸ್ಪತ್ರೆಯಲ್ಲಿ ಇರುವ ಮಗು ಮತ್ತು ರಾಮದುರ್ಗದಲ್ಲಿ ಇರುವ ಮಗು ಗುಣಮುಖರಾಗುತ್ತಿದ್ದಾರೆ ಎಂದು ತಿಳಿಸಿದರು.