ಆರು ತಿಂಗಳಿನಿಂದ ನಮಗೆ ಶೇ.0.1ರಷ್ಟು ಕೂಡ ಕೊರೊನಾ ಪಾಸಿಟಿವಿಟಿ ಇರಲಿಲ್ಲ. ಒಂದೇ ದಿನದಲ್ಲಿ ಶೇ.1.6ರಷ್ಟು ಆಗಿದೆ ಎಂದರೆ ಇದು ಮೂರನೇ ಅಲೆಯ ಆರಂಭ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಅವರು ಬೆಂಗಳೂರಿನಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಬೆಂಗಳೂರು ಮೊದಲ ಅಲೆ, ಎರಡನೇ ಅಲೆ, ಮೂರನೇ ಅಲೆಯಲ್ಲಿಯೂ ಎಪಿಸೆಂಟರ್ ಆಗಿದೆ. ಯಾಕೆಂದರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇಲ್ಲಿಯೇ ಇದೆ. ಹೊರ ದೇಶ, ಹೊರ ರಾಜ್ಯಗಳಿಂದ ಅತೀ ಹೆಚ್ಚು ಜನರು ಮೊದಲಿಗೆ ಬರುವುದು ಬೆಂಗಳೂರಿಗೆ. ಬೆಂಗಳೂರಿನಿಂದ ಬೇರೆ ಕಡೆಗೆ ಹೋಗುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿಯೇ ಬೆಂಗಳೂರಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಮೂರನೇ ಅಲೆ ರಾಜ್ಯಕ್ಕೆ ಎಂಟ್ರಿ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಈಗ ತಮಗೆ ಏನು ಅನಿಸುತ್ತದೆ. ಇದು ಮೂರನೇ ಅಲೆಯೇ ಅಲ್ಲವೇ..? ಆರು ತಿಂಗಳಿನಿಂದ ನಮಗೆ ಶೇ.0.1ರಷ್ಟು ಕೂಡ ಕೊರೊನಾ ಪಾಸಿಟಿವಿಟಿ ಇರಲಿಲ್ಲ. ಒಂದೇ ದಿನದಲ್ಲಿ ಶೇ.1.6ರಷ್ಟು ಆಗಿದೆ ಎಂದರೆ ಇದು ಮೂರನೇ ಅಲೆಯ ಆರಂಭ ಎಂದರು.
ಇನ್ನು ಶಾಲೆಗಳನ್ನು ಬಂದ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಚಿವರು ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ 1ರಿಂದ 9ನೇ ತರಗತಿ ಬಂದ್ ಮಾಡಲಾಗಿದೆ. ಈ ಎಲ್ಲ ವಿಚಾರಗಳನ್ನು ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸುತ್ತೇವೆ. ಈ ಎಲ್ಲಾ ವಿಷಯಗಳು ನಮ್ಮ ತಲೆಯಲ್ಲಿವೆ ಎಂದರು.