ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ನಿನ್ನೆ ನಡೆಸಿದ ಆರ್‍ಟಿಸಿಪಿಸಿಆರ್ ಟೆಸ್ಟನಲ್ಲಿ ಮಲ್ಲಿಕಾರ್ಜುನ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಪ್ರಸ್ತುತ ಮಲ್ಲಿಕಾರ್ಜುನ ಖರ್ಗೆ ಅವರು ಹೋಮ್ ಐಸೋಲೇಷನ್‍ನಲ್ಲಿ ಇದ್ದಾರೆ. ಅವರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದು, ಎರಡನೆಯ ಡೋಸ್ ಪಡೆದ ನಂತರ 9 ತಿಂಗಳು ಅವಧಿ ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಅವರು ಇನ್ನೂ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿಲ್ಲ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ಕಚೇರಿಯ ಐವರು ಸಿಬ್ಬಂದಿ ಸೇರಿದಂತೆ ಕಾರ್ಯದರ್ಶಿಗಳಿಗೆ ಕೂಡಾ ಕೊರೊನಾ ಪಾಸಿಟಿವ್ ಆಗಿದ್ದು ಅವರೆಲ್ಲ ಹೋಮ್ ಐಸೋಲೇಷನ್‍ನಲ್ಲಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ. ಇನ್ನು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಮೊದಲ ದಿನ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಭಾಗಿಯಾಗಿದ್ದರು. ಇವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಇನ್ನಿತರ ಕೈ ನಾಯಕರಿಗೆ ಸಧ್ಯ ಕೊರೊನಾ ಆತಂಕ ಶುರುವಾಗಿದೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಪಾದಯಾತ್ರೆಯಲ್ಲಿನ ಸೋಂಕು ಬೆಳಗಾವಿಗೂ ಹರಡಲಿದೆಯಾ ಎಂಬ ಆತಂಕ ಮೂಡಿದೆ.