Belagavi

ಮೂಲ ಇಂಗ್ಲೀಷನಲ್ಲಿ ವಚನಗಳು ಇದ್ದಿದ್ರೆ ಜಗತ್ತಿನ ಜನ ತಲೆ ಮೇಲೆ ಹೊತ್ತು ಕುಣಿದಾಡ್ತಿದ್ರು: ಡಾ.ಬಸವರಾಜ್ ಜಗಜಂಪಿ

Share

ಒಂದು ವೇಳೆ ಬಸವಾದಿ ಶರಣರ ವಚನ ಸಾಹಿತ್ಯ ಮೂಲ ಇಂಗ್ಲೀಷಿನಲ್ಲಿಯೇ ಇದ್ದಿದ್ದರೆ ಜಗತ್ತಿನಲ್ಲಿ ಎಲ್ಲರೂ ತಲೆ ಮೇಲೆ ಹೊತ್ತುಕೊಂಡು ಕುಣಿದಾಡುತ್ತಿದ್ದರು ಎಂದು ಹಿರಿಯ ಸಾಹಿತಿ ಡಾ.ಬಸವರಾಜ್ ಜಗಜಂಪಿ ಅವರು ತಮ್ಮ ಅಭಿಪ್ರಾಯ ತಿಳಿಸಿದರು.

ರವಿವಾರ ಸಾಯಂಕಾಲ ಬೆಳಗಾವಿಯ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವಸೇನೆ ಸಂಯುಕ್ತ ಆಶ್ರಯದಲ್ಲಿ ಅಮವಾಸ್ಯೆಯ ಶರಣ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಬಸವರಾಜ್ ಮತ್ತು ಸರೋಜಾ ಬಡಿಗೇರ ಶರಣ ದಂಪತಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ನಂತರ ವೇದಿಕೆ ಮೇಲಿದ್ದ ಗಣ್ಯರು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಇದಾದ ಬಳಿಕ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಡಾ.ಬಸವರಾಜ್ ಜಗಜಂಪಿ ಅವರು ಮಾತನಾಡಿ, 12ನೇ ಶತಮಾನದ ಶರಣ ಮೋಳಿಗೆ ಮಾರಯ್ಯ ಅವರ ಆನೆ ಕುದುರೆ ಭಂಡಾರವಿರ್ದಡೇನೊ..? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ..? ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ ಎಂಬ ವಚನ ಮತ್ತು ಅಲ್ಲಮಪ್ರಭು ದೇವರ ಭೂಮಿ ನಿನ್ನದಲ್ಲ, ಹೇಮ ನಿನ್ಮದಲ್ಲ, ಕಾಮಿನಿ ನಿನ್ನವಳಲ್ಲ ಅದು ಜಗಕ್ಕಿಕ್ಕಿದ ವಿಧಿ ನಿನ್ನೊಡವೆ ಎಂಬುದು ಜ್ಞಾನರತ್ನ ಅಂತಪ್ಪ ದಿವ್ಯರತ್ನವ ಕೆಡೆಗುಡದೆ ಆ ರತ್ನವ ನೀನಲಂಕರಿಸಿಯಾದಡೆ ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೇ ವಚನದ ಅರ್ಥದ ಸಾರವನ್ನು ಬಿಚ್ಚಿಟ್ಟರು. ವಚನಗಳು ವರ್ತಮಾನದ ನಮ್ಮ ಬದುಕಿಗೆ ಬೆಳಕು ಕೊಡುತ್ತವೆ. ಒಂದು ವೇಳೆ ವಚನ ಸಾಹಿತ್ಯ ಮೂಲ ಇಂಗ್ಲೀಷಿನಲ್ಲಿ ಇದ್ದಿದ್ದರೆ ಜಗತ್ತಿನಲ್ಲಿ ಎಲ್ಲರೂ ತಲೆ ಮೇಲೆ ಹೊತ್ತುಕೊಂಡು ಕುಣಿದಾಡುತ್ತಿದ್ದರು. ಚಿಂತನೆ, ಅನುಭವ, ಅನುಭಾವ ಇದೆ. ಅಂತಹ ಬೆಳಕು ವಚನಗಳಲ್ಲಿ ಇವೆ. ಹೀಗಾಗಿ ಎಲ್ಲರೂ ಹೆಚ್ಚೆಚ್ಚು ವಚನಗಳನ್ನು ಅಧ್ಯಯನ ಮಾಡಿ, ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು. ಈ ವೇಳೆ ಲಿಂಗಾಯತ ಮುಖಂಡರಾದ ಬಸವರಾಜ್ ರೊಟ್ಟಿ, ಅಶೋಕ ಮಳಗಲಿ, ನ್ಯಾಯವಾದಿ ಎಸ್.ಬಿ.ಸುಲ್ತಾನಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!