ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮ ಪಂಚಾಯತಿಗೆ ನಡೆದಿದ್ದ ಚುನಾವಣೆಯ ಮತ ಏಣಿಕೆಯಲ್ಲಿ ಅಕ್ರಮವಾಗಿದೆ. ಹೀಗಾಗಿ ಮತ್ತೊಮ್ಮೆ ಚುನಾವಣೆ ನಡೆಸಿ, ಪಾರದರ್ಶಕವಾಗಿ ಮತ ಏಣಿಕೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಹೌದು ಡಿ.27ರಂದು ಬಿಜಗರ್ಣಿ ಗ್ರಾಮ ಪಂಚಾಯತಿಯ ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. ಮತಪೆಟ್ಟಿಗೆಗಳನ್ನು ಭದ್ರತೆಯೊಂದಿಗೆ ತಹಶೀಲ್ದಾರ್ ಕಚೇರಿಯ ಸ್ಟ್ರಾಂಗ್ ರೂಮ್‍ಗೆ ಪೊಲೀಸರು ತೆಗೆದುಕೊಂಡು ಹೋಗಿದ್ದರು. ಇನ್ನು ಡಿ.30ರಂದು ನಡೆದ ಮತ ಏಣಿಕೆ ಸಂದರ್ಭದಲ್ಲಿ ಬಿಜಗರ್ಣಿ, ಕವಳೇವಾಡಿ, ಎಳೆಬೈಲ, ರಾಕಸಕೊಪ್ಪ ಪೋಲಿಂಗ್ ಏಜೆಂಟ್‍ಗಳು ಕೌಟಿಂಗ್ ಸೆಂಟರ್‍ಗೆ ಹೋದಾಗ ಮತಪೆಟ್ಟಿಗೆಗಳು ಮೊದಲೇ ಓಪನ್ ಆಗಿದ್ದು ಕಂಡು ಬಂದಿದೆ. ಹೀಗ್ಯಾಕೆ ಎಂದು ಏಜೆಂಟ್‍ಗಳು ಪ್ರಶ್ನಿಸಿದಾಗ ಅದನ್ನು ಯಾರೂ ಓಪನ್ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ನಂತರ ಕೌಟಿಂಗ್ ಮುಗಿದ ಬಳಿಕ ಪ್ರತಿ ಮತಪೆಟ್ಟಿಗೆಯಿಂದ ಎರಡು, ನಾಲ್ಕು ವೋಟ್ ಹೆಚ್ಚಿಗೆ ಬಂದಿವೆ. ಇದನ್ನೂ ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿಗಳು ಹೀಗೆ ಬರುತ್ತದೆ ಎಂದು ಹೇಳಿ ಏಜೆಂಟ್‍ಗಳನ್ನು ಕಳಿಸಿಕೊಟ್ಟಿದ್ದರು. ನಾವು ತಹಶೀಲ್ದಾರ್‍ನ್ನು ವಿಚಾರಿಸಿದರೆ ನಮಗೆ ಏನು ಮಾಡೋದಿಕ್ಕೆ ಬರೋದಿಲ್ಲ. ಡಿಸಿ ಸಾಹೇಬರಿಗೆ ಬೇಕಾದ್ರೆ ದೂರು ಕೊಡಿ ಎಂದು ಹೇಳಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವೇಳೆ ಗ್ರಾಮದ ಮುಖಂಡ ವಿನಯ್ ಕದಂ ಮಾತನಾಡಿ ಬಿಜಗರ್ಣಿ ಗ್ರಾಮ ಪಂಚಾಯತಿ ಚುನಾವಣೆ ಮತ ಏಣಿಕೆಯಲ್ಲಿ ಅಕ್ರಮವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜಗರ್ಣಿ ಗ್ರಾಮ ಪಂಚಾಯತಿ ಹಲವು ಮುಖಂಡರು ಭಾಗಿಯಾಗಿದ್ದರು.