ಬೆಳಗಾವಿ ದಿನದಿಂದ ದಿನಕ್ಕೆ ಸ್ಮಾರ್ಟ ಆಗುತ್ತಿದೆ ಎಂದು ಇಲ್ಲೊಂದು ಸ್ಮಾರ್ಟ ಬಸ್‍ಸ್ಟಾಂಡ್‍ನ್ನು ನಿರ್ಮಾಣ ಮಾಡಲಾಗಿತ್ತು. ಈ ಬಸ್‍ಸ್ಟಾಂಡ್‍ನ್ನು ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡಿ ಇನ್ನು 15 ದಿನ ಕಳೆದಿಲ್ಲ. ಅಷ್ಟರೊಳಗೆ ಈ ಬಸ್‍ಸ್ಟಾಂಡ್ ದನದ ಕೊಟ್ಟಿಗೆ ಆಗಿಬಿಟ್ಟಿದೆ. ಈ ಬಸ್‍ಸ್ಟಾಂಡ್‍ಗೆ ಹೇಳೋವರಿಲ್ಲ..ಕೇಳವರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು ಬಸ್‍ಸ್ಟಾಂಡ್‍ನಲ್ಲಿಯೇ ಆರಾಮವಾಗಿ ಓಡಾಡುತ್ತಿರುವ ಎಮ್ಮೆ ಕರು, ಕಂಠಪೂರ್ತಿ ಸಾರಾಯಿ ಕುಡಿದು ಎಲ್ಲೆಂದರಲ್ಲಿ ಮಲಗಿರುವ ವ್ಯಕ್ತಿ, ಕಸದ ರಾಶಿಯಿಂದ ಸುತ್ತಲೂ ದುರ್ವಾಸನೆ, ಬೀದಿ ನಾಯಿಗಳ ಭೀತಿಯಲ್ಲಿರುವ ಪ್ರಯಾಣಿಕರು..ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಕೇಂದ್ರ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿರುವ ಹೈಟೆಕ್ ಬಸ್‍ಸ್ಟಾಂಡ್‍ನ ಅವ್ಯವಸ್ಥೆಯ ದೃಶ್ಯಗಳನ್ನು.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಮಾರ್ಟಸಿಟಿ ಯೋಜನೆಯಡಿ ಈ ಬಸ್‍ಸ್ಟಾಂಡ್‍ನ್ನು ಹೈಟೆಕ್ ಆಗಿಯೇ ನಿರ್ಮಾಣ ಮಾಡಲಾಗಿತ್ತು. ಅಧಿವೇಶನ ವೇಳೆ ಸಿಎಂ ಬೊಮ್ಮಾಯಿ ಅವರೇ ಈ ಬಸ್‍ಸ್ಟಾಂಡ್‍ನ್ನು ಉದ್ಘಾಟನೆ ಕೂಡ ಮಾಡಿದ್ದರು. ಈ ಬಸ್‍ಸ್ಟಾಂಡ್‍ನಿಂದ ದಿನನಿತ್ಯ ಸಾವಿರಾರು ಪ್ರಯಾಣಿಕರು ಗೋವಾ, ಮಹಾರಾಷ್ಟ್ರ, ಕಾರವಾರ ಸೇರಿದಂತೆ ಬೆಳಗಾವಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳುತ್ತಾರೆ. ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂದು ಈ ಬಸ್‍ಸ್ಟಾಂಡ್‍ನಲ್ಲಿ ಹೈಟೆಕ್ ಲೂಕ್ ಕೊಡಲಾಗಿತ್ತು. ಅಲ್ಲದೇ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಕೊಠಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಇಲ್ಲಿ ಯಾವೊಬ್ಬ ಪೊಲೀಸರು ಕೂಡ ಇಲ್ಲ, ಮಹಿಳಾ ಪ್ರಯಾಣಿಕರ ಕೊಠಡಿ, ಟಿಕೇಟ್ ಕೌಂಟಿಂಗ್ ಸೆಂಟರ್ ನಿರ್ಮಾಣ ಮಾಡಿದ್ದರೂ ಕೂಡ ಓಪನ್ ಆಗಿಲ್ಲ. ಇಲ್ಲಿನ ಅವ್ಯವಸ್ಥೆ ನೋಡಿದ್ರೆ ಅನಾಥ ಭಾವನೆ ಕಾಡುತ್ತಿದೆ. ಅಷ್ಟೇ ಅಲ್ಲದೇ ಇಲ್ಲಿ ಅಳವಡಿಸಲಾಗಿದ್ದ ಮಾರ್ಕಿಂಗ್ ಕಲ್ಲು ಕೂಡ ಬಿದ್ದು ಹೋಗಿದೆ. ಒಳ್ಳೆಯ ಬಸ್‍ಸ್ಟಾಂಡ್ ಆಯ್ತು ಇನ್ನೇನು ನಮಗೆ ಅನುಕೂಲ ಆಗುತ್ತದೆ ಎಂದು ಜನ ಅಂದುಕೊಳ್ಳುವಷ್ಟರಲ್ಲಿ ಇದು ಹದಗೆಟ್ಟು ಹೈದರಾಬಾದ್ ಆಗಿದೆ. ಸಂಪೂರ್ಣವಾಗಿ ಅವ್ಯವಸ್ಥೆಯ ಆಗರವಾಗಿದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಈ ವೇಳೆ ಮಾತನಾಡಿದ ಇಲ್ಲಿ ಯಾವುದೇ ರೀತಿಯ ಸ್ವಚ್ಛತೆಯನ್ನು ಕಾಪಾಡುತ್ತಿಲ್ಲ. ಬಸ್‍ಸ್ಟಾಂಡ್‍ನಲ್ಲಿಯೇ ಕುಡಿದು ಮಲಗಿದ್ದಾರೆ. ಬಿಡಾಡಿ ನಾಯಿಗಳ ಕಾಟ ಬೇರೆ ಇದೆ. ಒಂದು ಒಳ್ಳೆಯ ಗುಣಮಟ್ಟದ ಬಸ್‍ಸ್ಟಾಂಡ್ ನಿರ್ಮಾಣ ಮಾಡಿದ್ದರು. ಆದರೆ ಅದರ ನಿರ್ವಹಣೆ ಮಾತ್ರ ಸರಿಯಾಗಿ ಆಗುತ್ತಿಲ್ಲ. ಇಲ್ಲಿ ಯಾರೊಬ್ಬರೂ ಸೆಕ್ಯೂರಿಟಿ ಗಾರ್ಡ ಕೂಡ ಇಲ್ಲ. ಗುಣಮಟ್ಟದ ವಸ್ತುಗಳನ್ನು ಕಾಪಾಡಿಕೊಳ್ಳುವ ಪರಿಸ್ಥಿತಿ ಬೆಳಗಾವಿಯಲ್ಲಿ ಇಲ್ಲ ಎಂದರೆ, ಜನರ ಮನಸ್ಥಿತಿ ಸರಿ ಇಲ್ಲವೋ..? ಅಥವಾ ಆಡಳಿತ ಸರಿಯಾಗಿ ನಡೆಯುತ್ತಿಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಇನ್ಮೇಲಾದ್ರೂ ಜಿಲ್ಲಾಡಳಿತ ಇದನ್ನು ಒಳ್ಳೆಯ ರೀತಿ ನಿರ್ವಹಣೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಮುಂದುವರಿದು ಮಾತನಾಡಿದ ಅವರು ಉದ್ಘಾಟನೆ ಆದ ನಂತರ ಇದರ ಬಗ್ಗೆ ಯಾರೂ ಕೇರ್ ಮಾಡುತ್ತಿಲ್ಲ. ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂದು ನೋಡಲು ಯಾರೂ ಕೂಡ ಇಲ್ಲ. ಬಸ್ ಸ್ಟಾಂಡ್ ಹಿಂದೆ ಮನೆ ತರಹ ಮಾಡಿಕೊಂಡು ಕೆಲವೊಂದಿಷ್ಟು ಜನರು ಮಲಗಿದ್ದಾರೆ. ಅದೇ ರೀತಿ ಓರ್ವ ವ್ಯಕ್ತಿ ಕುಡಿದು ಮಲಗಿದ್ದಾನೆ. ಇಷ್ಟೇಲ್ಲಾ ಆಗುತ್ತಿದ್ದರೂ ಯಾರೂ ಕೂಡ ಇದರ ಬಗ್ಗೆ ಗಮನಹರಿಸುತ್ತಿಲ್ಲ. ಅತ್ಯಂತ ಉತ್ಸಾಹದಿಂದ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಬಸ್‍ಸ್ಟಾಂಡ್ ಉದ್ಘಾಟನೆ ಮಾಡಿಸಿದ್ದ ಉತ್ತರ ಶಾಸಕ ಅನಿಲ್ ಬೆನೆಕ ಅವರು ಮತ್ತೆ ಇಲ್ಲಿ ಒಮ್ಮೆಯೂ ತಿರುಗಿಯೂ ನೋಡಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಒಟ್ಟಿನಲ್ಲಿ ಜನರಿಗೆ ಒಳ್ಳೆಯದಾಗಲಿ ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಇಂತಹ ಬಸ್‍ಸ್ಟಾಂಡ್‍ಗಳನ್ನು ಸರ್ಕಾರ ನಿರ್ಮಾಣ ಮಾಡುತ್ತದೆ. ಆದರೆ ಇವುಗಳ ನಿರ್ವಹಣೆಯನ್ನು ಮಾತ್ರ ಸರ್ಕಾರ ಮರೆತು ಬಿಡುತ್ತದೆ. ಅಧಿಕಾರಿಗಳ ಬೇಜವಾಬ್ದಾರಿಗೆ ಜನ ಬೇಸತ್ತಿದ್ದಾರೆ. ಈ ವರದಿಯಿಂದಲಾದ್ರೂ ಎಚ್ಚೆತ್ತುಕೊಂಡು ಇಲ್ಲಿನ ಅವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.