ಇಂದು ಬೆಳಗಾವಿ ನಗರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನೇವರಿ 26 ಗಣರಾಜ್ಯೋತ್ಸವ ಆಚರಣೆ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಯಿತು.

ನಗರದಲ್ಲಿ ಜನೇವರಿ 26 ಗಣರಾಜ್ಯೋತ್ಸವ ಆಚರಣೆ ಪ್ರಯುಕ್ತ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಗಣರಾಜ್ಯೋತ್ಸವವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸಿ ಅದ್ಧೂರಿಯಾಗಿ ಆಚರನೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಕೊವಿಡ್ ಹರಡುತ್ತಿರುವುದರಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಕ್ಕಳಿಗೆ ಈ ಸಾರ್ವಜನಿಕ ಸಭೆಯಲ್ಲಿ ಅವಕಾಶ ನೀಡಿಲ್ಲ. ನಗರದಲ್ಲಿ ಎಲ್ಲಾ ಮುಖ್ಯ ಸರ್ಕಲ್‍ಗಳಲ್ಲಿ ಅಲಂಕಾರಕ್ಕೆ ಹಾಗೂ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಇನ್ನು ಬೆಳಿಗ್ಗೆ 9ಗಂಟೆಗೆ ಧ್ವಜಾರೋಹಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಸಂಕ್ಷೀಪ್ತವಾಗಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಈ ಬಾರಿ ಸ್ವಲ್ಪ ವಾತಾವರಣ ತಿಳಿಯಾಗಿತ್ತು. ಆದರೆ ಕೊರೊನಾ ಹಾಗೂ ಒಮಿಕ್ರಾನ್‍ನಿಂದಾಗಿ ಕಳೆದ 15 ದಿನಗಳಿಂದ ವಾತಾವರಣ ಮತ್ತೆ ಬಿಗಡಾಯಿಸಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಾಂಪ್ರದಾಯಿಕವಾಗಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿ ಕೊವಿಡ್ ನಿಯಮ ಪಾಲನೆ ಕುರಿತಂತೆ ಹೇಳಿದರು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಡಾ. ಬೋರಲಿಂಗಯ್ಯ, ಜಿಲ್ಲಾಡಳಿತದ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ನೀಡಲಾಗಿದೆ. ಇನ್ನು ಈಗಾಗಲೇ ಸರಕಾರ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅವುಗಳನ್ನು ಪಾಲಿಸಿಕೊಂಡು ಅವುಗಳ ಇತಿಮಿತಿಯೊಳಗೆ ಆಚರಣೆ ಮಾಡಬೇಕೆಂದು ಹೇಳಿದರು.
ಇನ್ನು ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕೆಂದು ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ಆದರೆ ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ನಿಯಮಾವಳಿಗಳನ್ನು ಸರಕಾರದ ಆದೇಶದಂತೆ ಪಾಲಿಸಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.