ಬೆಳಗಾವಿಯಲ್ಲಿ ಗಡಿ ವಿವಾದದ ಹೆಸರಿನಲ್ಲಿ ಬೆಂಕಿ ಹಚ್ಚುವ ನಾಡದ್ರೋಹಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟಿದರೂ ಕೂಡ ಇನ್ನು ಅವರಿಗೆ ಅರಿವು ಬಂದಿಲ್ಲ. ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವ ಎಂಇಎಸ್ ಪುಂಡರು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ಕನ್ನಡ ನಾಮಫಲಕಕ್ಕೆ ಮಸಿ ಬಳೆಯುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಕೆಲಸ ಮಾಡಿದ್ದಾರೆ.

ಹೌದು ಕಂಗ್ರಾಳಿ(ಕೆಎಚ್) ಗ್ರಾಮದ ಹೊರ ವಲಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಫಲಕಕ್ಕೆ ಎಂಎಇಸ್ ಪುಂಡರು ಮಸಿ ಬಳೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇತ್ತಿಚೆಗಷ್ಟೇ ನಗರದಲ್ಲಿ ಶಾಂತಿ ಕದಡಲು ಯತ್ನಿಸಿದ್ದ ನಾಡದ್ರೋಹಿಗಳನ್ನು ಈಗಾಗಲೇ ಹಿಂಡಲಗಾ ಜೈಲಿಗೆ ಅಟ್ಟಲಾಗಿದೆ. ಅಲ್ಲದೇ ದೇಶದ್ರೋಹಿ, ಗೂಂಡಾ ಕಾಯ್ದೆಯಡಿಯಲ್ಲಿ ಕೇಸ್ ಜಡಿಯಲಾಗಿದೆ. ಇಷ್ಟಿದ್ದರೂ ಕೂಡ ಎಂಇಎಸ್ ಪುಂಡರು ಮತ್ತೆ ತಮ್ಮ ಉದ್ಧಟತನ ಪ್ರದರ್ಶಿಸಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸೊಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.