ಹುಬ್ಬಳ್ಳಿ-ಧಾರವಾಡದ ನೂರಕ್ಕೂ ಹೆಚ್ಚು ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಅಲ್ಲದೇ ಬೆಳಗಾವಿಯ ಮೂವರು ಪೊಲೀಸರಿಗೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲಾಡಳಿತ ಇಲ್ಲಿನ ಪೊಲೀಸರಿಗೂ ಕಡ್ಡಾಯ ಕೋವಿಡ್ ಟೆಸ್ಟ್‍ಗೆ ಸೂಚನೆ ಕೊಟ್ಟಿದೆ. ಹೀಗಾಗಿ ಬೆಳಗಾವಿಯ ವಿವಿಧ ಕಡೆಗಳಲ್ಲಿ ಪೊಲೀಸರು ಟೆಸ್ಟಗೆ ಮುಗಿ ಬಿದ್ದಿದ್ದಾರೆ.
ಹೌದು ಫ್ರಂಟ್‍ಲೈನ್ ವಾರಿಯರ್ಸ ಆಗಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ಪರೀಕ್ಷೆ ಮಾಡಲಾಗುತ್ತಿದೆ. ಅಲ್ಲದೇ ಈಗಾಗಲೇ ಬೆಳಗಾವಿಯ ಮೂವರು ಪೊಲೀಸರಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ನಗರದ ಕೇಂದ್ರ ಬಸ್ ನಿಲ್ದಾಣ, ಬಿಮ್ಸ ಆಸ್ಪತ್ರೆ, ಪೊಲೀಸ್ ಭವನ ಸೇರಿದಂತೆ ಪೊಲೀಸರು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸ್ಥಳದಿಂದ ಸಮೀಪ ಇರುವ ತಪಾಸಣಾ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ತಮ್ಮ ಸ್ವ್ಯಾಬ್ ಕೊಡುತ್ತಿದ್ದಾರೆ. ಇನ್ನು ಇದರಲ್ಲಿ ಅದೆಷ್ಟು ಪಾಸಿಟಿವ್ ಕೇಸ್‍ಗಳು ದೃಢಪಡುತ್ತವೆ ಎಂಬ ಆತಂಕ ಮೂಡಿದೆ.
