ಗುಮ್ಮಟನಗರಿ ವಿಜಯಪುರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹೀಗೆಯೇ ಬೀದಿ ನಾಯಿಯೊಂದು ಮಗವಿನ ಮೇಲೆ ದಾಳಿ ನಡೆಸಿದೆ.

ವಿಜಯಪುರ ನಗರದ ಕೊಂಚಿ ಕೊರವರ ಕಾಲೋನಿಯಲ್ಲಿ ನಿನ್ನೆ ಸಂಜೆ ಬೀದಿ ನಾಯಿಯೊಂದು ಅಂಗಡಿಯಿಂದ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿದೆ. ವಿಜಯಪುರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ನಾಯಿಗಳು ದಾಳಿ ನಡೆಸುತ್ತಿವೆ. ನಗರದಲ್ಲಿ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಪರಿಣಾಮ ಬಾಲಕನ ಕೈ ಹಾಗೂ ಬೆನ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ನಾಯಿ ದಾಳಿ ನಡೆಸುತ್ತಿರುವುದನ್ನ ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನಾಯಿ ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ಮಹಾನಗರ ಪಾಲಿಕೆಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆ ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಹ ನಡೆಸಲಾಗಿದೆ. ಆದರೆ, ಅವುಗಳನ್ನು ಹಿಡಿದು ನಗರ ಪ್ರದೇಶದಿಂದ ಹೊರ ಹಾಕಲು ಆಗುತ್ತಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.