ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯ ಮೇಕೆದಾಟು ಪಾದಯಾತ್ರೆ ಬಡಿದಾಟ ಶುರುವಾಗಿದೆ. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕೈ ನಾಯಕರು ಹೇಳಿದ್ರೆ, ಅದೇಗೆ ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡ್ತಿರೋ ನಾವು ನೋಡ್ತಿವೀ ಅನ್ನೋ ರೀತಿಯಲ್ಲಿ ಕಮಲ ನಾಯಕರು ಮಾತನಾಡಿದ್ದಾರೆ. ಬನ್ನಿ ಆ ಕುರಿತ ಒಂದು ಪೊಲಿಟಿಕಲ್ ರಿಪೋರ್ಟ ನೋಡಿಕೊಂಡು ಬರೋಣ.

ಹೌದು ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ 9ರಿಂದ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಭರ್ಜರಿ ತಯಾರಿ ಮಾಡಿಕೊಂಡಿದೆ. ಆದರೆ ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಈಗಾಗಲೇ ಕೆಲ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ಬಿಜೆಪಿ ಸರ್ಕಾರದ ವಿರುದ್ಧ ಕೈ ನಾಯಕರು ಕೆಂಡ ಕಾರುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜನರು ಎಲ್ಲವನ್ನು ನೋಡುತ್ತಿದ್ದಾರೆ. ನಾವು ಯಾವುದೇ ದುರುದ್ದೇಶದಿಂದ ಮಾರ್ಗಸೂಚಿ ಹೊರಗೆ ತಂದಿಲ್ಲ. ಕಾಂಗ್ರೆಸ್‍ನಲ್ಲಿ ಬಹಳ ವರ್ಷಗಳ ಕಾಲ ಸಚಿವರಾಗಿ, ಪ್ರಮುಖ ಸ್ಥಾನದಲ್ಲಿ ಇದ್ದವರಿದ್ದಾರೆ. ಒಂದು ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕಾನೂನು ಕೆಲಸವನ್ನು ಕಾನೂನು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದು ಕೋವಿಡ್ ಲಾಕ್‍ಡೌನ್ ಅಲ್ಲ, ಬಿಜೆಪಿ ಲಾಕ್‍ಡೌನ್. ಜನರು, ವ್ಯಾಪಾರಿಗಳನ್ನು ಇವರು ಮರ್ಡರ್ ಮಾಡುತ್ತಿದ್ದಾರೆ. ಅವರ ಪಕ್ಷದ ನಾಯಕರು ಪ್ರತಿಭಟನೆ, ಮೆರವಣಿಗೆ ಮಾಡಿದರು, ನಿನ್ನೆಯಷ್ಟೇ ಪ್ರಧಾನಿ ಮೋದಿ ಅವರು ದೊಡ್ಡ ದೊಡ್ಡ ರ್ಯಾಲಿ ಮಾಡಿದ್ದಾರೆ. ಇದು ಯಾವ ಲೆಕ್ಕ ಎಂದು ಪ್ರಶ್ನಿಸಿದ ಡಿಕೆಶಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಸ್ವಿಮ್ ಮಾಡಿದ್ರಲ್ಲಾ, ಅದಕ್ಕೆ ಮೊದಲು ಸುಧಾಕರ್ ಮೇಲೆ ಕೇಸ್ ಹಾಕಲಿ, ಅದೇ ರೀತಿ ಜನಾಶೀರ್ವಾದ ಯಾತ್ರೆ ಮಾಡಿದರಲ್ಲಾ ಬಿಜೆಪಿ ಮಂತ್ರಿಗಳ ಮೇಲೆ ಕೇಸ್ ಹಾಕಲಿ, ಯಡಿಯೂರಪ್ಪ, ಶ್ರೀರಾಮುಲು, ಬೊಮ್ಮಾಯಿ ಮೇಲೆ ಮೊದಲು ಕೇಸ್ ಹಾಕಲಿ. ನಾವು ಯಾವುದೇ ರ್ಯಾಲಿ, ಧರಣಿ ಮಾಡುತ್ತಿಲ್ಲ. ಕೋವಿಡ್ ನಿಯಮ ಪಾಲಿಸಿ, ನೀರಿಗಾಗಿ ನಡೆಯುತ್ತೇವೆ, ವಾಕ್ ಫಾರ್ ವಾಟರ್ ಎಂದು ಗುಡುಗಿದ್ದಾರೆ.
ಅದೇ ರೀತಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆಯಿಂದ ಹಿಂದೆ ಸರಿಯುವುದಿಲ್ಲ. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಪಾಲನೆ ಮಾಡಬೇಕು, ಸ್ಯಾನಿಟೈಜ್ ಮಾಡಬೇಕು. ಇದೆಲ್ಲವನ್ನು ನಾವು ಮಾಡಿ, ಪಾದಯಾತ್ರೆ ಮಾಡುತ್ತೇವೆ. ನಾವು ಜನರ ಪ್ರಾಣ ಉಳಿಸುವ ಕೆಲಸವನ್ನೂ ಮಾಡುತ್ತೇವೆ ಎಂದು ಎಂದು ಟಾಂಗ್ ಕೊಟ್ಟಿದ್ದಾರೆ.
ಒಟ್ಟಾರೆ ಮೇಕೆದಾಟು ಪಾದಯಾತ್ರೆ ವಿಚಾರ ಬಿಜೆಪಿ ಕಾಂಗ್ರೆಸ್ ಮಧ್ಯ ಮತ್ತೊಂದು ಸುತ್ತಿನ ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದ್ದು. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.