ಪ್ರಸವ ವೇದನೆಯಿಂದ ಬಳಲುತ್ತಿದ್ದ ಆಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪಶುವೈದ್ಯಾಧಿಕಾರಿಗಳಿಗೆ ಒಪ್ಪಿಸುವ ಮೂಲಕ ಕೆಎಸ್ ಆರ್ ಟಿಸಿ ಸಿಬ್ಬಂದಿ ಮಾನವೀಯ ಕಳಕಳಿ ಮೆರೆದಿದ್ದಾರೆ.

ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಇಂಥದ್ದೊಂದು ಮನಕಲುಕುವ ಘಟನೆ ನಡೆದಿದೆ. ಬಸ್ ನಿಲ್ದಾಣದ ಆವರಣದಲ್ಲಿ ಆಕಳೊಂದು ಪ್ರಸವ ವೇದನೆಯಿಂದ ಬಳಲುತ್ತಿತ್ತು. ತೀವ್ರ ರಕ್ತಸ್ರಾವ ಆಗುತ್ತಿತ್ತು. ಇದನ್ನು ಕಂಡ ಸಿಬ್ಬಂದಿ ಆಕಳಿನ ಆರೈಕೆಗೆ ಮುಂದಾದರು. ಕೆಲಹೊತ್ತಿನ ಬಳಿಕ ಪಶುವೈದ್ಯರನ್ನು ಕರೆಯಿಸಿದರು. ಪಶುವೈದ್ಯ ಡಾ.ಶರಣಗೌಡ ಸೂಕ್ತ ಚಿಕಿತ್ಸೆ ನೀಡಿದರು. ಕೆಲಹೊತ್ತಿನ ಬಳಿಕ ಆಕಳು ಕರುವಿಗೆ ಜನ್ಮ ನೀಡಿತು. ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಪಶುವೈದ್ಯರ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.