ಸರ್ಕಾರದ ಮಾರ್ಗಸೂಚಿ ಪ್ರಕಾರ ಪಾದಯಾತ್ರೆಗೆ ನಾವು ಅನುಮತಿ ಕೊಡಲು ಬರುವುದಿಲ್ಲ. ಈಗಾಗಲೇ ಜಿಲ್ಲಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ನೋಟಿಸ್ ಕೊಟ್ಟಿದ್ದಾರೆ. ಈ ತರಹ ಮಾಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಅನುಮತಿ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದು ರಾಮನಗರ ಎಸ್‍ಪಿ ಗಿರೀಶ್ ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ನಾಳೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ರಾಮನಗರ ಎಸ್‍ಪಿ ಗಿರೀಶ್ ಅವರು ಕಾನೂನಿಗೆ ವಿರುದ್ಧವಾಗಿ ಹೋದಂತೆ ಆಗುತ್ತದೆ. ನೀವು ಮಾಡೋದು ಸರಿಯಲ್ಲ ಎಂದು ಹೇಳೋದನ್ನು ಹೇಳುತ್ತೇವೆ. ನಮಗೆ ಇನ್ನು ಸಮಯವಿದೆ. ಆದರೂ ಪಾದಯಾತ್ರೆ ಆರಂಭಿಸಿ ಮುಂದೆ ಹೊರಟರೆ, ನಾವು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇನ್ನು ಜಿಲ್ಲಾಧಿಕಾರಿಗಳು ನೋಟಿಸ್ ಕೊಟ್ಟ ಮೇಲೆ ಪಾದಯಾತ್ರೆ ಮಾಡಲು ಬರುವುದಿಲ್ಲ. ಮಾಡಿದರೂ ಕೂಡ ಅದು ಕಾನೂನು ಉಲ್ಲಂಘನೆ ಆಗುತ್ತದೆ. ಹೀಗಾಗಿ ಮುಂದಿನ ಕ್ರಮ ಏನು ತೆಗೆದುಕೊಳ್ಳಬೇಕೋ ಈಗ ಪ್ರಥಮ ವರ್ತಮಾನ ವರದಿ ದಾಖಲಿಸುತ್ತೇವೆ. ಸಂದರ್ಭಕ್ಕೆ ಅನುಸಾರವಾಗಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಯಾವ ರೀತಿ ಪಾದಯಾತ್ರೆ ಮಾಡುತ್ತಾರೆ ಅದು ಬಹಳ ಮುಖ್ಯ ಆಗುತ್ತದೆ. ಗೈಡ್‍ಲೈನ್ಸ ಪ್ರಕಾರ 300ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಈ ಬಗ್ಗೆ ಮತ್ತೊಮ್ಮೆ ತಿಳಿಸುತ್ತೇವೆ. ಕೋವಿಡ್ ಮಾರ್ಗಸೂಚಿಯಿದೆ, ಹೀಗಾಗಿ 300ಕ್ಕಿಂತ ಹೆಚ್ಚು ಜನರು ಸೇರಬಾರದು ಎಂದು ತಿಳಿಸುತ್ತೇವೆ. ಆದರೂ ಪಾದಯಾತ್ರೆ ನಡೆಸಿದ್ರೆ ರಾಷ್ಟ್ರೀಯ ವಿಪತ್ತು ಕಾಯ್ದೆ ಸೇರಿ ಇನ್ನಿತರ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ನಮಗೆ ಅವಕಾಶ ಇರುತ್ತದೆ ಎಂದರು. ಇನ್ನು ಸಾಕಷ್ಟು ಜನರು ಸೇರಿ ಅಹಿತಕರ ಘಟನೆಗಳು ಸಂಭವಿಸದಂತೆ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಂಡಿದ್ದೇವೆ. ರಾಮನಗರ ಜಿಲ್ಲೆಯ ಅಧಿಕಾರಿಗಳು, ಕೆಎಸ್‍ಆರ್‍ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯವರು ಇದ್ದಾರೆ. ಪ್ಲಾನ್-ಎ, ಪ್ಲಾನ್-ಬಿ, ಪ್ಲಾನ್-ಸಿ ಮಾಡಿಕೊಂಡಿದ್ದೇವೆ ಎಂದು ಎಸ್‍ಪಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.