Belagavi

ನಿಮ್ಮ ಅವ್ವ-ಅಪ್ಪ, ಅಜ್ಜ-ಅಜ್ಜಿ ಹಾಕಿಸಿಕೊಂಡಿದ್ದಾರೆ: ನೀವು ಲಸಿಕೆ ಹಾಕಿಸಿಕೊಳ್ಳಿ: ಗೋವಿಂದ ಕಾರಜೋಳ ಮನವಿ

Share

ಬೇರೆ ದೇಶಗಳು ಕೂಡ ನಮ್ಮ ದೇಶದಲ್ಲಿ ಯುವಕ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಯಂಗ್ ಇಂಡಿಯಾ ಎಂದು ಕರೆಯುತ್ತಾರೆ. ಯುವಕರಿಂದ ದೇಶದಲ್ಲಿ ಬದಲಾವಣೆ ನಾವು ಕಾಣುತ್ತಿದ್ದೇವೆ. ಭಾರತ ದೇಶ ಮುದುಕರ ದೇಶ ಅಲ್ಲ. ಯುವಕರ ದೇಶ. ಅದಕ್ಕಾಗಿ ನಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕರೆ ನೀಡಿದರು.

ದೇಶಾಧ್ಯಂತ ಇಂದಿನಿಂದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು. ಅದೇ ರೀತಿ ಬೆಳಗಾವಿಯಲ್ಲಿಯೂ ಕೂಡ ಕಿರಿಯರಿಗೆ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಗೋವಿಂದ ಕಾರಜೋಳ ಅವರು ನಿಮ್ಮ ಅವ್ವ, ಅಪ್ಪ, ಅಜ್ಜ, ಅಜ್ಜಿಗೂ ಲಸಿಕೆ ಹಾಕಿದ್ದಾರೆ. ಹೀಗಾಗಿ ನೀವು ಹೆದರಬೇಡಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಯಾವುದೋ ಕಾರಣಕ್ಕೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿರುತ್ತಾರೆ. ಅಂತವರ ಮನವಲಿಸಿ ಲಸಿಕೆ ಹಾಕಿಸಬೇಕು. ಅದೇ ರೀತಿ ಇದೇ ದಿನಾಂಕ 10ರಿಂದ ಬೂಸ್ಟರ್ ಡೋಸ್‍ನ್ನು ಕೊಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದೇವೆ. ದೇಶದಲ್ಲಿ ನರೇಂದ್ರ ಮೋದಿ ಅವರ ಕನಸನ್ನು ನಾವು ಈಡೇರಿಸಬೇಕಿದೆ ಎಂದರು.

ಮುಂದುವರಿದು ಮಾತನಾಡಿದ ಗೋವಿಂದ ಕಾರಜೋಳ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರತಿನಿತ್ಯ 6 ಸಾವಿರ ಜನರನ್ನು ಪರೀಕ್ಷೆ ಮಾಡಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಎಲ್ಲ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಕೋವ್ಯಾಕ್ಸಿನ್ 1 ಲಕ್ಷ 43 ಸಾವಿರ ಡೋಸ್ ಲಭ್ಯವಿದೆ. ಇನ್ನೊಂದೆರಡು ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಸಿಗುವ ಸಾಧ್ಯತೆಯಿದೆ. ನಮಗೆ ಲಸಿಕೆ ಕೊರತೆ ಇಲ್ಲ. ಅಲ್ಲದೇ ನಾವೆಲ್ಲರೂ ಕೂಡ ಎರಡೆರಡು ಸಲ ಲಸಿಕೆ ಹಾಕಿಕೊಂಡಿದ್ದೇವೆ. ಎರಡೆರಡು ಸಲ ಕೊರೊನಾ ಬಂದು ಹೋಗಿದೆ. ಹೀಗಾಗಿ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.

ನಂತರ ಸಂಸದೆ ಮಂಗಲ ಅಂಗಡಿ ಮಾತನಾಡಿ ಸರ್ಕಾರದ ವತಿಯಿಂದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಯಾರೂ ಕೂಡ ಹೆದರದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಪ್ರಧಾನಿ ಮೋದಿ ಅವರ ಕನಸಿನಂತೆ ಎಲ್ಲರೂ ಆರೋಗ್ಯಯುತವಾಗಿ ಇರಬೇಕು ಎಂಬ ಉದ್ದೇಶದಿಂದ ಲಸಿಕೆ ಹಾಕಿಸಿಕೊಳ್ಳಬೇಕು. ಅದೇ ರೀತಿ ಮೂರನೇ ಅಲೆ ಕೋವಿಡ್‍ನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉತ್ತರ ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಎಸ್‍ಪಿ ಲಕ್ಷ್ಮಣ ನಿಂಬರಗಿ, ಡಿಎಚ್‍ಓ ಡಾ.ಎಸ್.ವ್ಹಿ.ಮುನ್ಯಾಳ ಸೇರಿದಂತೆ ವಿವಿಧ ಅಧಿಕಾರಿಗಳು, ಮಕ್ಕಳು ಉಪಸ್ಥಿತರಿದ್ದರು.

Tags:

error: Content is protected !!