ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಇಂದು ಪಾದಯಾತ್ರೆಯನ್ನು ಪ್ರಾರಂಭಿಸಿದೆ. ವಿವಿಧ ಧಾರ್ಮಿಕ ಮುಖಂಡರು ವೇದಿಕೆಯ ಮೇಲೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೇಕೆ ದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಮಾಡುತ್ತಿರುವ ಪಾದಯಾತ್ರೆ ಇಂದು ಪದರಾರಂಭವಾಗಿದೆ. ಕನಕಪುರದ ಸಂಗಮ ಕ್ಷೇತ್ರದ ಕಾವೇರಿ ನದಿಯ ದಡದಲ್ಲಿಯೇ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಕಾರ್ಯಕ್ರಮ ಚಾಲನೆಗೂ ಮುನ್ನ ಡಿಕೆ ಶಿವಕುಮಾರ್ ಅವರು ತೆಪ್ಪದಲ್ಲಿ ನದಿಯ ಮಧ್ಯ ಭಾಗಕ್ಕೆ ತೆರಳಿ ಕಾವೇರಿ ತಾಯಿಗೆ ಪೂಜೆ ಸಲ್ಲಿಸಿದರು. ವಿವಿಧ ಧರ್ಮಗಳ ಸ್ವಾಮಿಜಿ ಹಾಗೂ ಮುಖಂಡರು ವೇದಿಕೆಯ ಮೇಲೆ ಉಪಸ್ಥಿತರಿದ್ದು, ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ವಿವಿಧ ಧರ್ಮಗಳ ಸ್ವಾಮಿಜಿಗಳು ಚಾಲನೆ ನೀಡಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಾಗೂ ಮಾಜಿ ಸಚಿವ ಎಚ್.ಕೆ ಪಾಟೀಲ್ ನಗಾರಿಯನ್ನು ಬಾರಿಸುವ ಮೂಲಕ ಮೇಕೆದಾಟು ಯೋಜನೆ ಪಾದಯಾತ್ರೆಗೆ ಚಾಲನೆ ನೀಡಿದರು. ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ನೇತೃತ್ವದ ತಂಡ ನಾಡಗೀತೆ, ರೈತಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತದ ಇಂಪು ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ಚಿತ್ರನಟ ದುನಿಯಾ ವಿಜಯ್ ಕೂಡ ಭಾಗಿಯಾಗಿದ್ದರು.
ಈ ವೇಳೆ ಮತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟು ಯೋಜನೆಗೆ ಸರಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಪಾದಯಾತ್ರೆಯನ್ನು ಆರಂಭಿಸಲಾಗಿದೆ. ಇಂದು ಪ್ರಾರಂಭವಾಗಿರುವ ಈ ಪಾದಯಾತ್ರೆ 19ನೇ ತಾರೀಕಿನ ವರೆಗೆ ನಡೆಯಲಿದೆ ಎಂದು ಪಾದಯಾತ್ರೆ ಕುರಿತು ಮಾಹಿತಿ ನೀಡಿದರು.