ಸಿದ್ದರಾಮಯ್ಯನವರ ಮೇಲೆ ಪೈಪೋಟಿ, ಸಿದ್ದರಾಮಯ್ಯ ಮುಖ್ಯಮಂತ್ರಿನಾ..? ನಾನು ಮುಖ್ಯಮಂತ್ರಿನಾ..? ನಾನು ಅದನ್ನು ಹೇಗೆ ಹೊಡೆದುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಪೈಪೋಟಿಗೆ ಬಿದ್ದಿದ್ದಾರೆ ಹೊರತು ಮೇಕೆದಾಟು ವಿಚಾರದಲ್ಲಿ ಇವರಿಗೆ ಯಾವುದೇ ಆಸಕ್ತಿ ವಹಿಸಿಲ್ಲ ಎಂದು ಸಚಿವ ಡಾ.ಅಶ್ವತ್ಥನಾರಾಯಣ ವಾಗ್ದಾಳಿ ಮಾಡಿದ್ದಾರೆ.

ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಕಾಂಗ್ರೆಸ್ ಪಕ್ಷದಲ್ಲಿ ನಾನು ನಾಯಕನಾ, ನೀನು ನಾಯಕನಾ..? ನಾನು ದೊಡ್ಡವನಾ..? ನಾನು ಚಿಕ್ಕವನಾ..? ಎನ್ನುವ ಪೈಪೋಟಿಯಲ್ಲಿ ಜನರಿಗೆ ಸುಳ್ಳು ಮಾಹಿತಿ ಕೊಟ್ಟು. ರಾಜಕೀಯ ಲಾಭಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ಇಂದು ಪಶ್ಚತ್ತಾಪದ, ಸುಳ್ಳಿನ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ಜವಾಬ್ದಾರಿ ಇಲ್ಲದೇ ಪಾದಯಾತ್ರೆ ಮಾಡುತ್ತಿದ್ದಾರೆ, ನೈತಿಕತೆ ಇಲ್ಲದೇ ಕಾರ್ಯ ನಿರ್ವಹಿಸುವ ಪಕ್ಷ ಕಾಂಗ್ರೆಸ್. ಅದರ ರಾಜ್ಯಾಧ್ಯಕ್ಷರು ಡಿ.ಕೆ.ಶಿವಕುಮಾರ್ ಅವರು ಎಂದು ಕಿಡಿಕಾರಿದರು.
ರಾಮನಗರ ಜಿಲ್ಲೆಯಲ್ಲಿನ ಸಂಪನ್ಮೂಲಗಳನ್ನೆಲ್ಲಾ ಲೂಟಿ ಹೊಡೆದು, ಏನೂ ಇಲ್ಲದ ಡಿಕೆ ಶಿವಕುಮಾರ್ ಸಾವಿರಾರು ಕೋಟಿಗಳಿಗೆ ಒಡೆಯನಾಗಿರುವುದು ಯಾವ ರೀತಿ..? ಏಳು ಬಾರಿ ಶಾಸಕರಾಗಿ ವ್ಯಾಪಾರ ಮಾಡಲು ಎಲ್ಲಿಂದ ಟೈಮ್ ಇವರಿಗೆ ಸಿಗುತ್ತದೆ. ಜನಪ್ರತಿನಿಧಿಗಳಾಗಿ, ಜನಪ್ರತಿನಿಧಿಗಳಿಗೋಸ್ಕರ ಆದವರಿಗೆ ಎಲ್ಲಿಂದ ಟೈಮ್ ಸಿಗುತ್ತದೆ. ಏಳು ಬಾರಿ ಶಾಸಕರಾಗಿ ಏನು ಮಾಡಿದ್ದಿರಿ ಎಂಬುದನ್ನು ಹೇಳಬೇಕು ಎಂದು ಅಶ್ವತ್ಥನಾರಾಯಣ ಸವಾಲು ಹಾಕಿದರು.
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ನಮ್ಮ ಪಾಲಿನ ನೀರನ್ನು ನಾವು ಕೇಳುತ್ತಿದ್ದೇವೆ. ಯಾವ ಕಳ್ಳತನ ಮಾಡುತ್ತಿಲ್ಲ. ಯಾವತ್ತೂ, ಯಾವ ಕಾರಣದಲ್ಲಿಯೂ, ಯಾವ ಸಂದರ್ಭದಲ್ಲಿಯೂ ಕಾಂಗ್ರೆಸ್ ಕಡೆಯಿಂದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವೇ ಇಲ್ಲ. ಏನಾದ್ರು ಸಾಧ್ಯವಿದ್ರೆ ಅದು ಬಿಜೆಪಿ ನೇತೃತ್ವದ ಸರ್ಕಾರದಿಂದಲೇ ಸಾಧ್ಯ. ನಮ್ಮ ಗಂಡಸ್ತನವನ್ನು ನಾವು ಕೆಲಸದಲ್ಲಿ ತೋರಿಸುತ್ತೇವೆ. ನಾವು ಗಂಡಸರಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುತ್ತೇವೆ. ನಿಮಗೆ ಏನಾದ್ರೂ ಗಂಡಸ್ತನ ಇದ್ದರೆ ಹೇಳಿ, ಹೇಗೆ ಈಡೇರಿಸುತ್ತಿರಿ ಎಂದು ಅಶ್ವತ್ಥನಾರಾಯಣ ಸವಾಲು ಹಾಕಿದರು.