ಮದುವೆ, ಜಾತ್ರೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ 300ಕ್ಕಿಂತಲೂ ಹೆಚ್ಚು ಜನರು ಸೇರದೇ ಸಹಕರಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಅನಿವಾರ್ಯವಾಗಿ ಜನ ಸಹಕರಿಸದೇ ಹೋದರೆ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು ಮೂರನೇ ಅಲೆಗೆ ನಮ್ಮ ಸರ್ಕಾರ ಜಿಲ್ಲೆಯ 9 ತಾಲೂಕಾಸ್ಪತ್ರೆಗಳು, 16 ಸಮುದಾಯ ಆರೋಗ್ಯ ಕೇಂದ್ರಗಳು, 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಬೆಡ್, ಐಸಿಯು ಬೆಡ್, ಲಸಿಕೆ, ಔಷಧಿ, ಇಂಜಕ್ಷನ್, ಜನರಲ್ ಬೆಡ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 2800 ಬೆಡ್‍ಗಳ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
15-18 ವರ್ಷದೊಳಗಿನ 2 ಲಕ್ಷ 47 ಸಾವಿರ ಮಕ್ಕಳಿಗೆ ಇಂದು ಕೋವ್ಯಾಕ್ಸಿನ್ ಹಾಕಲು ಸಾಂಕೇತಿಕವಾಗಿ ಚಾಲನೆ ಕೊಟ್ಟಿದ್ದೇನೆ. ಇನ್ನು ರಾಜ್ಯದಲ್ಲಿ ಮೊದಲ ಡೋಸ್ ಸರಾಸರಿ ಶೇ.97ರಷ್ಟು ಜನರ ತೆಗೆದುಕೊಂಡರೆ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಡೋಸ್ ಶೇ.99ರಷ್ಟು ಲಸಿಕೆ ಆಗಿದೆ. 2ನೇ ಡೋಸ್ ರಾಜ್ಯದಲ್ಲಿ ಸರಾಸರಿ ಶೇ.79ರಷ್ಟು ತೆಗೆದುಕೊಂಡಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ ಶೇ.83ರಷ್ಟು ಲಸಿಕೆ ಕೊಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೆಚ್ಚಿನ ಮಾಹಿತಿ ನೀಡಿದರು.
ಇನ್ನು ಬೆಳಗಾವಿಯ ಗಡಿಗಳಲ್ಲಿ ಚೆಕ್ ಪೋಸ್ಟಗಳನ್ನು ಹಾಕಬೇಕು ಎಂದು ಇಂದು ಬೆಳಿಗ್ಗೆ ಸಭೆ ಮಾಡಿ ಸೂಚನೆ ಕೊಟ್ಟಿದ್ದೇನೆ. ನಿನ್ನೆಯೂ ಹೇಳಿದ್ದೆ. ನಮ್ಮ ಅಧಿಕಾರಿಗಳು ವ್ಯವಸ್ಥಿತವಾಗಿ ಎಲ್ಲವನ್ನು ಮಾಡುತ್ತಿದ್ದಾರೆ. ನಮ್ಮ ಜಿಲ್ಲಾಧಿಕಾರಿ ಹಿರೇಮಠರು ಮೊದಲಿನಿಂದ ಈ ಜಿಲ್ಲೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆ ಸೇರಿ ಇನ್ನಿತರ ಇಲಾಖೆಗಳನ್ನು ಜೋಡಿಸಿ ಉತ್ತಮವಾದ ಸೇವೆಯನ್ನು ಕೊಡಲು ವ್ಯವಸ್ಥೆ ಮಾಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕಳ್ಳ ಮಾರ್ಗಗಳಲ್ಲಿಯೂ ಚೆಕ್ ಮಾಡುವ ವ್ಯವಸ್ಥೆಗೆ ಸೂಚನೆ ಕೊಡುತ್ತೇನೆ. ಅಲ್ಲಿಂದ ಬರುವವರಿಗೆ ನಿರ್ಬಂಧ ಹಾಕಬೇಕು, ಬರುವಂತವರು 2 ಡೋಸ್ ಹಾಕಿಸಿಕೊಂಡಿದ್ದಿರೋ..? ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ ತಂದಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದರು.