ಇಂದು ಸಾಯಂಕಾಲ ಕೋವಿಡ್ ಬಗ್ಗೆ ತಜ್ಞರ ಜೊತೆಗೆ ಸಭೆ ಆಗುತ್ತಿದೆ. ಅದರಲ್ಲಿ ಟಾಸ್ಕ್ ಫೋರ್ಸ ಸಮಿತಿ ಸದಸ್ಯರು, ತಜ್ಞರು, ಹಿರಿಯ ಅಧಿಕಾರಿಗಳು, ಸಚಿವರು ಇರುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಇದೀಗ ವಿಶ್ವದಲ್ಲಿ ಮತ್ತೆ ಕೊರೊನಾ ಹೆಚ್ಚಾಗುತ್ತಿದೆ. ಡಬ್ಲುಎಚ್‍ಓ ಈಗಾಗಲೇ ಹಲವಾರು ಎಚ್ಚರಿಕೆಯನ್ನು ಕೊಟ್ಟಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಹಲವು ಮಾರ್ಗದರ್ಶನ ಕೂಡ ಕೊಟ್ಟಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಯಾವಾಗ ಪಕ್ಕದ ರಾಜ್ಯಗಳಲ್ಲಿ ಕೊರೊನಾ ಹೆಚ್ಚಾಗುತ್ತದೆ ಅದರ ಪರಿಣಾಮ ನಮ್ಮ ರಾಜ್ಯದ ಮೇಲೂ ಆಗುತ್ತದೆ ಎಂದರು.
ಇನ್ನು ಮಹಾರಾಷ್ಟ್ರ, ಕೇರಳ ಗಡಿ ಇರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಹಲವಾರು ವ್ಯಾಪಾರ, ವಹಿವಾಟು ಆಗುತ್ತದೆ. ಇದರ ಬಗ್ಗೆ ನಾವು ಕಟ್ಟೆಚ್ಚರ ವಹಿಸಬೇಕಿದೆ. ಈಗಾಗಲೇ ಗಡಿಗಳನ್ನು ಬಿಗಿ ಮಾಡಿದ್ದೇವೆ, ಭದ್ರತೆ ಮಾಡಿದ್ದೇವೆ. ಎರಡು ಡೋಸ್ ಆಗಿರಬೇಕು, ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ ತೋರಿಸುವುದನ್ನು ಕಡ್ಡಾಯ ಮಾಡಿದ್ದೇವೆ. ಅದಾಗಿಯೂ ಸಹ ಇನ್ನಷ್ಟು ಕಟ್ಟೆಚ್ಚರ ವಹಿಸುವ ಅವಶ್ಯಕತೆಯಿದೆ ಎಂದರು.