ರಾಜ್ಯಾಂದ್ಯಂತ ಕೊವಿಡ್ ರೂಪಾಂತರಿ ಒಮಿಕ್ರಾನ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಗಡಿಭಾಗಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.

ರಾಜ್ಯದಲ್ಲಿ ಹೊಸ ಕೊವಿಡ್ ತಳಿ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಾದ ಕೊಗನೊಳ್ಳಿ ಚೆಕ್‍ಪೋಸ್ಟ್, ಹಾಗೂ ಕಾಗವಾಡ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಇತ್ತ ಐಗಳಿಯಲ್ಲಿ ಪೊಲೀಸ್ ಇಲಾಖೆ ರಸ್ತೆಯ ಮೇಲೆ ಬ್ಯಾರಿಕೇಡ್‍ಗಳನ್ನು ಹಾಕಿ ತಪಾಸಣೆ ನಡೆಸುತ್ತಿದ್ದಾರೆ.
ಇನ್ನು ಕಣಕುಂಬಿಯಲ್ಲಿ ಪೊಲೀಸ್ ಸಿಬ್ಬಂದಿ ಅಂತರ್‍ರಾಜ್ಯ ಪ್ರವೇಶಿಸುವವರ ಮೇಲೆ ತೀವೃ ನಿಗಾವಹಿಸಿದ್ದಾರೆ. ಇನ್ನು ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಹಾಗೂ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದ ಪ್ರಯಾಣಿಕರನ್ನು ವಾಪಸ್ ಕಳಿಸುತ್ತಿದ್ದಾರೆ.
ಇನ್ನು ಕೊವಿಡ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ನಗರದ ಮಾರ್ಕೆಟ್ ಏರಿಯಾ ಹಾಗೂ ಪ್ರಮುಖ ಜನಸೇರುವ ಸ್ಥಳಗಳಲ್ಲಿ ಮೈಕ್‍ನಲ್ಲಿ ಸಾರ್ವಜನಿಕರಿಗೆ ತಿಳಿ ಹೇಳುತ್ತಿದ್ದಾರೆ. ಇನ್ನು ಕೆಲವೆಡೆ ಅನಾವಶ್ಯಕವಾಗಿ ಗುಂಪು ಸೇರುವ ಜನರಿಗೆ ಪೊಲೀಸ್ ಅಧಿಕಾರಿಗಳು ಕರೆದು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಿಳಿ ಹೇಳಿದ್ದಾರೆ.