ಇಲ್ಲಿನ ವಿದ್ಯಾನಗರದ ಪ್ರತಿಷ್ಠಿತ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಎಚ್. ಎಸ್.ಕೋತಂಬ್ರಿ ಕಾಲೇಜಿನಲ್ಲಿ ಮಹಾಮಾರಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಹು-ಧಾ ಮಹಾನಗರ ಪಾಲಿಕೆಯಿಂದ ಸೀಲ್ ಡೌನ್ ಮಾಡಲಾಯಿತು.

ಕಾಲೇಜಿನ ಪ್ರಾಚಾರ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಕಳೆದೆರಡು ದಿನಗಳ ಹಿಂದೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರಂತೆ ನಿನ್ನೆ ವರದಿ ಬಂದಿದ್ದು ಅದರಲ್ಲಿ ಕೆಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸೋಂಕು ವಕ್ಕರಿಸಿದ್ದು ತಿಳಿದು ಬಂದಿದೆ. ಇನ್ನೂ ಕೆಲ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಸುಮಾರು 16 ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎನ್ನಲಾಗಿದೆ.
ಅದರಂತೆ ಇಂದು ಬೆಳಿಗ್ಗೆ ಕಾಲೇಜನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದು, ಮುಂದಿನ ಆದೇಶ ಬರುವವರೆಗೂ ಸೀಲ್ ಡೌನ್ ಇರಲಿದೆ. ನಾಳೆಯಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. ಆದರೆ ಕೊರೊನಾದಿಂದಾಗಿ ಕಾಲೇಜು ಸೀಲ್ ಡೌನ್ ಮಾಡಿದರೂ ಸಹಿತ ಕಾಲೇಜಿನ ಸಿಬ್ಬಂದಿಗಳು ಕಾಲೇಜಿಗೆ ಪ್ರವೇಶ ಮಾಡುತ್ತಿರುವುದು ಮತ್ತಷ್ಟು ಆತಂಕ ತರುತ್ತಿದೆ. ಇದರಿಂದ ಸೋಂಕು ಮತ್ತಷ್ಟು ಉಲ್ಬಣವಾಗುವ ಭೀತಿ ಎದುರಾಗಿದೆ. ಆದ್ದರಿಂದ ಕಾಲೇಜು ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧಕ್ಕೆ ಪಾಲಿಕೆ ಆದೇಶ ಹೊರಡಿಸಬೇಕಿದೆ.