Banglore

ಕಾಂಗ್ರೆಸ್ ಪಾದಯಾತ್ರೆ ಕಪಟ ಬೀದಿ ನಾಟಕ: ಸುಧಾಕರ್ ಲೇವಡಿ

Share

ರೈತರಿಗೆ ಕೇವಲ ರಾಜಕೀಯ ದೃಷ್ಟಿ ಇಟ್ಟುಕೊಂಡು ಹತಾಶರಾಗಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಇದು. ಬಿಬಿಎಂಪಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಮಾಡುತ್ತಿರುವ ಕಪಟ ಬೀದಿ ನಾಟಕ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಕರ್ನಾಟಕದ ಜನತೆ, ನಮ್ಮ ರೈತರು ಇವರ ಕಪಟ ಬೀದಿ ನಾಟಕವನ್ನು ನೋಡುತ್ತಿದ್ದಾರೆ. 2013ರಿಂದ 2019ರವರೆಗೆ ಅವರದ್ದೇ ಆಡಳಿತ, ಸರ್ಕಾರ. ಅವರೇ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಎಲ್ಲರೂ ಇದ್ದರು. ಇಬ್ಬರು ಕೂಡ ಕಾವೇರಿ ಪ್ರಾಂತ್ಯಕ್ಕೆ ಬರುವಂತವರು. ಆವಾಗ ಯಾಕೆ ಮಾಡಲಿಲ್ಲ. ಐದು ವರ್ಷದಲ್ಲಿ ಡಿಪಿಆರ್‍ನ್ನೇ ಮಾಡಲಿಲ್ಲ. ನಿಜವಾಗಲೂ ಇದನ್ನು ನೋಡಿ ನನಗೆ ಹೇಸಿಗೆ ಆಗುತ್ತಿದೆ. ಕಾವೇರಿ ತಾಯಿಗೆ ಇವರು ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಕರ್ನಾಟಕದಲ್ಲಿ ನಿಜವಾಗಲೂ ಕೋವಿಡ್ ಇಲ್ಲವಂತೆ ಪಾಪ. ಬಿಜೆಪಿಯೇ ಅದನ್ನು ಸೃಷ್ಟಿ ಮಾಡುತ್ತಿದೆಯಂತೆ. ಸರ್ಕಾರವೇ ನಂಬರನ್ನೇ ಸೃಷ್ಟಿ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಅವರದ್ದೇ ಸರ್ಕಾರ ಇರುವ ಮಹಾರಾಷ್ಟ್ರದಲ್ಲಿ ಇಡೀ ದೇಶದಲ್ಲಿಯೇ ಅತೀ ಹೆಚ್ಚು 48 ಸಾವಿರ ಕೇಸ್‍ಗಳನ್ನು ನಿನ್ನೆ ತೋರಿಸಿದ್ದಾರೆ. ಅದನ್ನು ಯಾರು ಮಾಡಿದ್ದಾರೆ, ನಾವೇ ಕಳಿಸಿಕೊಟ್ಟಿದ್ದಿವಾ ಎಂದು ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಟಾಂಗ್ ಕೊಟ್ಟರು.

ಮೇಕೆದಾಟು ಯೋಜನೆ ಯಾರಾದ್ರೂ ಮಾಡಿದ್ರೆ ಅದು ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ, ಬಿಜೆಪಿ ಸರ್ಕಾರ ಮಾಡುತ್ತದೆ ಹೊರತು, ಕಾಂಗ್ರೆಸ್ ನಾಯಕರು ಮಾಡಿಲ್ಲ, ಮಾಡೋದು ಇಲ್ಲ ಎಂದರು. ಇನ್ನು ನಿಯಮ ಬಾಹಿರವಾಗಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ರೈತರು, ಯುವಕರು, ಪ್ರಜ್ಞಾವಂತ ರಾಜ್ಯದ ಛೀಮಾರಿ ಹಾಕಲಿದ್ದಾರೆ. ಇದರಿಂದ ಅನೇಕ ಜನರಿಗೆ ಆರೋಗ್ಯದ ಆಪತ್ತನ್ನು ತಂದೊಡ್ಡವರಿದ್ದಾರೆ. ಇವರ ಕುತಂತ್ರಕ್ಕೆ ಅಲ್ಲಿ ಹೋಗಿ ಭಾಗಿಯಾಗಿ ನಾಳೆ ಆರೋಗ್ಯದ ಆಪತ್ತನ್ನು ತಂದುಕೊಳ್ಳುತ್ತಾರೋ ಅವರ ಬಗ್ಗೆ ನಾನು ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಅವರಿಗೆ ಸೂಕ್ತ ಚಿಕಿತ್ಸೆಯನ್ನು ನಾವು ನೀಡುತ್ತೇವೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

Tags:

error: Content is protected !!