ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಮೀರಿ ಜನ ಸೇರುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಕೋವಿಡ್ ಉಲ್ಭಣ ಆಗುವ ಸಂದರ್ಭವಿದೆ ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ ಅವರು ಕೋವಿಡ್ ನಿಯಮಾವಳಿಗಲ್ಲಿಯೇ ತಾವು ಪಾದಯಾತ್ರೆ ಮಾಡಿ, ಅದಕ್ಕೆ ನಮ್ಮ ಸರ್ಕಾರದ ಯಾವುದೇ ನಿರ್ಬಂಧ ಇಲ್ಲ. ಅದನ್ನು ಬಿಟ್ಟು ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೊರೊನಾ ಹೆಚ್ಚಾಗುವ ಆತಂಕವಿದೆ. ಜನರ ಜೀವ ರಕ್ಷಣೆ ಬಹಳ ಮುಖ್ಯ, ರಾಜಕೀಯ ಹೋರಾಟ ಮುಖ್ಯ ಅಲ್ಲ. ಅದಕ್ಕಾಗಿ ಕಾಂಗ್ರೆಸ್ ನಾಯಕರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಎಂದು ಸಲಹೆ ನೀಡಿದರು.
ಕೋವಿಡ್ ನಿಯಮ ಉಲ್ಲಂಘಿಸಿದ್ರೆ ಕ್ರಮ ತೆಗೆದುಕೊಳ್ಳುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಗೋವಿಂದ ಕಾರಜೋಳ ಕ್ರಮ ತೆಗೆದುಕೊಳ್ಳುವುದು ಒಂದೇ ಪರಿಹಾರ ಅಲ್ಲ. ನಾವು ಕಾನೂನನ್ನು ಗೌರವಿಸಬೇಕು. ಜನರ ಜೀವ ರಕ್ಷಣೆಗೆ ಮುಂದಾಗಬೇಕು. ಸಮಾಜದಲ್ಲಿ ನಾವು ಆದರ್ಶ ವ್ಯಕ್ತಿಗಳಾಗಿ ಕಾಣಬೇಕು ಎಂದರೆ ನಾವು ಕಾನೂನನ್ನು ಪಾಲನೆ ಮಾಡಬೇಕು ಎಂದರು.