Belagavi

ಕರ್ನಾಟಕ ಸ್ವಾಭಿಮಾನಿ ವೇದಿಕೆಯಿಂದ ಅಗಲಿದ ಚಂಪಾಗೆ ಶ್ರದ್ಧಾಂಜಲಿ

Share

ಕನ್ನಡ ಚಳುವಳಿಯ ಗಟ್ಟಿ ಧ್ವನಿಯಾಗಿದ್ದ ನೇರ ನುಡಿಯ ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲರ ಅಗಲಿಕೆಯಿಂದ ಕನ್ನಡ ನಾಡು-ನುಡಿ-ಗಡಿ-ಜಲ ಚಳುವಳಿಯ ಮೂಲ ಕೊಂಡಿ ಕಳಚಿದಂತಾಗಿ ಹೋರಾಟಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಕನ್ನಡ ಅಸ್ಮಿತೆಗೆ ಧಕ್ಕೆ ಬಂದಾಗಲೆಲ್ಲ ನಾಡಿನಾದ್ಯಂತ ಕನ್ನಡ ಹೋರಾಟಗಾರರಿಗೆ ಶಕ್ತಿ ತುಂಬುತ್ತಿದ್ದ ಚಂಪಾ ಅವರ ಸ್ಥಾನವನ್ನು ಸಧ್ಯದ ಮಟ್ಟಿಗೆ ಯಾರೂ ತುಂಬಲಾರರು” ಎಂದು ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅಭಿಪ್ರಾಯ ಪಟ್ಟರು.

ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ನಗರದ ಕಣಬರಗಿಯ ಸಮತಾ ಶಾಲೆಯಲ್ಲಿ ಜರುಗಿದ ಕನ್ನಡ ಕಟ್ಟಾಳು, ಹಿರಿಯ ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲರಿಗೆ ‘ನುಡಿ-ನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ” ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರೊ. ಚಂಪಾರವರು ಆಡಳಿತ ವ್ಯವಸ್ಥೆಗೇ ಸೆಡ್ಡು ಹೊಡೆದು ಸಮಾಜಮುಖಿ ಚಿಂತನೆಯ ಗೋಷ್ಠಿಗಳನ್ನು ಏರ್ಪಡಿಸಿದ್ದು ಅವರ ಸೈದ್ಧಾಂತಿಕ ಬದ್ಧತೆಗೆ ಸಾಕ್ಷಿಯಾಗಿದೆ. ಗೋಕಾಕ ಚಳುವಳಿ, ಬಂಡಾಯ ಚಳುವಳಿ,ಸಾಲಹಳ್ಳಿ-ಬೆಂಡಿಗೇರಿ ಪ್ರಕರಣಗಳ ಹೋರಾಟದ ಮೂಲಕ ನನ್ನಂಥ ಸಾವಿರಾರು ಹೋರಾಟಗಾರರನ್ನು ಮುನ್ನಡೆಸಿದ್ದಾರೆ. ಅವರ ಆಶಯದ ಹೋರಾಟಗಳನ್ನು ನಾವೆಲ್ಲ ಮುನ್ನಡೆಸಿಕೊಂಡು ಹೋಗಬೇಕು” ಎಂದರು.

ಬಂಡಾಯ ಸಾಹಿತಿ, ಪತ್ರಕರ್ತ ಡಾ. ಕೆ.ಎನ್. ದೊಡ್ಡಮನಿ ಅವರು ಮಾತನಾಡಿ, ” ಪ್ರೊ. ಚಂದ್ರಶೇಖರ ಪಾಟೀಲರು ತಮ್ಮ ಮೊಣಚು, ವ್ಯಂಗ್ಯ ನುಡಿಗಳಿಂದ ವ್ಯವಸ್ಥೆಯ ವಿರುದ್ಧ ಕುಟುಕುತ್ತಿದ್ದರು. ತಮ್ಮ ಸಂಕ್ರಮಣ ಪತ್ರಿಕೆಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ತಿದ್ದಿ-ತೀಡಿ ಅರ್ಥಪೂರ್ಣ ಸಾಹಿತ್ಯ ರಚನೆಗೆ ತಾಯಿಬೇರಾದವರು. ಬಂಡಾಯದ ಅಂಥ ತಾಯಿಬೇರನ್ನು ಕಳೆದುಕೊಂಡದ್ದು ನಮ್ಮಂಥ ಬರಹಗಾರರಿಗೆ ತುಂಬಲಾಗದ ನಷ್ಟವಾಗಿದೆ” ಎಂದು ನುಡಿನಮನ ಸಲ್ಲಿಸಿದರು.

ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಜಿಲ್ಲಾ ಸಂಚಾಲಕ ಶಂಕರ ಬಾಗೇವಾಡಿ ಅವರು ಮಾತನಾಡಿ, ” ಮನುಷ್ಯಪ್ರೀತಿಯ ಸೆಲೆಯಂತಿದ್ದ ದಲಿತ-ಬಂಡಾಯ-ರೈತ ಚಳುವಳಿಯ ಪ್ರೊ. ಚಂದ್ರಶೇಖರ ಪಾಟೀಲರು ನೇರ ನುಡಿಗೆ ಹೆಸರಾದವರು. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಿರಬೇಕೆಂಬ ದಿಟ್ಟ ನಿಲುವು ಹೊಂದಿದ್ದ ಅವರು ಯಾರ ಮುಲಾಜಿಗೂ ಒಳಗಾಗದೆ ಕನ್ನಡ ಮಾಧ್ಯಮ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ನಡೆಸಿದ ಎರಡು ಸಾವಿರಕ್ಕಿಂತ ಹೆಚ್ಚಿನ ಶಾಲೆಗಳನ್ನು ಮುಚ್ಚಿಸಿದ್ದು ಇತಿಹಾಸ. ಅಂಥ ಕನ್ನಡ ಪ್ರಜ್ಞೆಯನ್ನು ನಾವಿಂದು ಬೆಳೆಸಿಕೊಳ್ಳಬೇಕು”ಎಂದರು.

ವೀರೇಂದ್ರ ಗೋಬರಿ, ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ಜಯಶ್ರೀ ನಾಯಕ, ಮಲಿಕಜಾನ ಗದಗಿನ ನುಡಿನಮನ ಸಲ್ಲಿಸಿದರು.
ಶಾಂತಾ ಮೋದಿ, ತೇಜಸ್ವಿನಿ ನಾಯ್ಕರ್, ಪೂಜಾ ಪಾಟೀಲ, ಅರುಣಾ ಪಾಟೀಲ, ಪೂಜಾ ಬಾಗೇವಾಡಿ, ರೇಣುಕಾ ಶಿರೂರ ಭಾಗಿಯಾದ್ದರು.
ಪ್ರಾಂಶುಪಾಲೆ ತೇಜಸ್ವಿನಿ ಬಾಗೇವಾಡಿ ಕಾರ್ಯಕ್ರಮ ನಿರ್ವಹಿಸಿದರು.

Tags:

error: Content is protected !!