Banglore

ಕರ್ನಾಟಕ ವಿಧಾನಪರಿಷತ್ ಅತ್ಯಂತ ಹಿರಿಯ ಸದನ: ಇದರ ಬಗ್ಗೆ ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯವಿದೆ: ಸಿಎಂ ಬೊಮ್ಮಾಯಿ

Share

ಕರ್ನಾಟಕ ವಿಧಾನಪರಿಷತ್ ಅತ್ಯಂತ ಹಿರಿಯ ಸದನ. ಅಂತಹ ಒಂದು ದಿವ್ಯ ಪರಂಪರೆಯಿದೆ. ಇತಿಹಾಸದ ಪುಟಗಳನ್ನು ನಾವು ತೆರೆದು ನೋಡಿದಾಗ ಬಹಳ ಮಹತ್ವದ ಚರ್ಚೆಯಾಗಿದೆ. ಕೆಳಮನೆಯಿಂದ ಬಂದ ಬಿಲ್‍ಗಳಿಗೆ ಹೊಸ ದಿಕ್ಸೂಚಿ ಕೊಡುವ, ಹೊಸ ಆಯಾಮವನ್ನು ಕೊಡುವ ಕೆಲಸವನ್ನು ಮೇಲ್ಮನೆ ಮಾಡಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ರಾಜ್ಯದ ವಿಧಾನ ಪರಿಷತ್ತಿಗೆ ಅವಧಿ ಪೂರ್ಣಗೊಳಿಸಿದ 19 ವಿಧಾನಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಅವಧಿಪೂರ್ಣಗೊಳಿಸಿದ ಸದಸ್ಯರಿಗೆ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ವಿಧಾನಪರಿಷತ್ ಡುಯಲ್ ಕ್ಯಾಮರಾ ವ್ಯವಸ್ಥೆ. ಬ್ರಿಟಿಷರ ವೆಸ್ಟ್ ಮಿನಿಸ್ಟರ್ ವ್ಯವಸ್ಥೆಯಲ್ಲಿಯೂ ಕೂಡ ಇದೆ. ಅಲ್ಲಿ ರಾಜ್ಯಸತ್ವ ಮತ್ತು ಪ್ರಜಾಪ್ರಭುತ್ವ ಇರುವ ಹಿನ್ನೆಲೆಯಲ್ಲಿ ನಿರಂತರವಾಗಿ ಸಂಬಂಧಗಳು, ಕೊಂಡಿಗಳು ಇರಬೇಕು ಎಂದು ಸ್ಥಾಪಿಸಲಾಗಿದೆ. ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ, ಚುನಾವಣೆ ಪದ್ಧತಿಯಲ್ಲಿ ಹಲವಾರು ಕ್ರಮಗಳು ಇದ್ದವು. ಪ್ರಜಾತಾಂತ್ರಿಕವಾದ ನಮ್ಮ ದೇಶದಲ್ಲಿ ಬಹಳಷ್ಟು ಸುಧಾರಣೆ ಆಗಬೇಕಾದ ಅವಶ್ಯಕತೆ ಇತ್ತು. ಹೀಗಾಗಿ ವಿವಿಧ ಕ್ಷೇತ್ರಗಳ ಜನ ವಿಧಾನಸಭೆಗೆ ಬರುವುದು ಕಷ್ಟಸಾಧ್ಯ ಎಂದು ಹೇಳಿ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ವಿಧಾನಪರಿಷತ್ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬರಲಾಗಿದೆ. ವಿವಿಧ ಕ್ಷೇತ್ರದ ಪರಿಣಿತರು ಇಲ್ಲಿ ಬರುತ್ತಾರೆ, ಅವರ ಎಲ್ಲ ಅನುಭವವನ್ನು ಧಾರೆ ಎರೆಯುತ್ತಾರೆ. ಹಾಗೂ ಆ ಸಮಸ್ಯೆಗೆ ವಿವಿಧ ರೂಪದಲ್ಲಿ ಪರಿಹಾರ ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಅಂತಹ ಒಂದು ಮಾರ್ಗದರ್ಶಕ ಹಿರಿಯರ ಸದನ. ಇದರ ಇತಿಹಾಸ, ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಿದೆ. ವಿವಿಧ, ವೈಶಿಷ್ಟ್ಯಪೂರ್ಣವಾದ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಅದನ್ನು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ವಿಧಾನಪರಿಷತ್‍ನ ಮಹತ್ವವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.

ಇನ್ನು ವಿಧಾನಸಭೆಯಲ್ಲಿ ಆಗಿರುವುದನ್ನು ಮರು ಸ್ಪಷ್ಟನೆ ರೀತಿಯಲ್ಲಿ ವಿಧಾನಪರಿಷತ್‍ನಲ್ಲಿ ಆಗುವಂತಹದು. ಅದಕ್ಕೆ ಇನ್ನಷ್ಟು ಸಕಾರಾತ್ಮಕವಾದ ವಿಚಾರಗಳನ್ನು, ವೈಚಾರಿಕತೆಯನ್ನು ಸೇರಿಸಿ ಅದರ ಮೌಲ್ಯವನ್ನು ಹೆಚ್ಚಿಸುವ ಗುರುತುರ ಜವಾಬ್ದಾರಿ ವಿಧಾನಪರಿಷತ್ ಮೇಲಿದೆ. ಹೀಗಾಗಿ ವಿಧಾನಪರಿಷತ್ ಪಾತ್ರ ಮತ್ತು ಸದಸ್ಯರ ಪಾತ್ರ ಆವಾಗವಾಗ ಸಿಂಹಾವಲೋಕನ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಿಎಂ ಬೊಮ್ಮಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಇನ್ನಿತರ ಹಿರಿಯ ಸದಸ್ಯರು ಉಪಸ್ಥಿತರಿದ್ದರು.

Tags:

error: Content is protected !!