ಖಂಡಿತವಾಗಲೂ ಒಮಿಕ್ರಾನ್ ಮತ್ತು ಮೂರನೇ ಅಲೆ ನಿರೀಕ್ಷೆಯಂತೆ, ಎಲ್ಲ ವರದಿಗಳ ಪ್ರಕಾರ ವೇಗವಾಗಿ ಹರಡುತ್ತಿದೆ. ಶೇ.3.95ರಷ್ಟು ಪಾಸಿಟಿವಿಟಿ ರೇಟ್ ನಿನ್ನೆ ಕಂಡು ಬಂದಿದೆ. ಇದು ಬಹಳ ಹೆಚ್ಚು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ-ಮೈಸೂರು, ಉಡುಪಿ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ಪಾಸಿಟಿವಿಟಿ ಆಗುತ್ತಿದೆ. ಹೀಗಾಗಿ ಈ ಜಿಲ್ಲಾಡಳಿತಗಳ ಜೊತೆಗೆ ಇನ್ನಷ್ಟು ವಿಶೇಷವಾಗಿ ಮಾತನಾಡುವುದು, ಸಭೆಯನ್ನು ಮಾಡುತ್ತೇವೆ. ಮತ್ತಷ್ಟು ಕಠಿಣವಾಗಿ ಅದನ್ನು ನೋಡಿಕೊಂಡು ಪಾಸಿಟಿವಿಟಿ ಕಡಿಮೆ ಮಾಡಬೇಕಿದೆ ಎಂದರು.
ಇನ್ನು ನಿನ್ನೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಸಭೆಯನ್ನು ಕರೆದು, ಒಂದು ಗಂಟೆ ವಿಶೇಷ ಸುದ್ದಿಗೋಷ್ಠಿ ಮಾಡಿದೆ. ಒಂದು ರಾಜ್ಯ, ದೇಶದಲ್ಲಿ ಸಂಪೂರ್ಣ ಲಸಿಕೆ ಕೊಡುವ ಮೂಲಕ ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಅಥವಾ ಮಣಿಸಲು ಸಾಧ್ಯವಿಲ್ಲ. ಇಡೀ ವಿಶ್ವದ ಪ್ರತಿಯೊಂದು ದೇಶದಲ್ಲಿ ಸಂಪೂರ್ಣ ಲಸಿಕಾಕರಣ ಆದಾಗ ಮಾತ್ರ ನಾವು ಈ ರೋಗವನ್ನು ಸಂಪೂರ್ಣವಾಗಿ ಮಣಿಸಲು ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.