Belagavi

ಇನ್ಮೇಲೆ ಲಾಕ್‍ಡೌನ್ ಮಾಡೋದಾದ್ರೆ ಎಲ್ಲಾ ಕಲಾವಿದರಿಗೆ ಪರಿಹಾರ ನೀಡಿ..!

Share

ಸರಕಾರ ಈ ಬಾರಿ ಲಾಕ್‍ಡೌನ್ ಮಾಡೋದಾದ್ರೆ ಜಿಲ್ಲೆಯ ವಿವಿಧ ಕಲಾವಿದರಿಗೆ ಪರಿಹಾರ ಧವನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ವಿವಿಧ ಕಲಾವಿದರುಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ರಾಜ್ಯದಲ್ಲಿ ಎಲ್ಲಾ ಕಲಾವಿದರು ಕೊರೊನಾ ಹಿನ್ನೆಲೆ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಅದರಂತೆ ಜಿಲ್ಲಾ ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಈ ಬಾರಿ ಸರಕಾರ ಲಾಕ್‍ಡೌನ್ ಮಾಡುವುದಾದರೆ ಈಗಾಗಲೇ ಸಂಕಷ್ಟದಲ್ಲಿರುವ ವಿವಿಧ ಕಲಾವಿದರಿಗೆ ಮಾಸಿಕವಾಗಿ ತಲಾ 5ಸಾವಿರ ರೂಪಾಯಿ ಪರಿಹಾರಧನ ನೀಡಬೇಕೆಂದು ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಲಾವಿದ ಸಂಜೂ ಬಸಯ್ಯ, ಇದು ಕಲಾವಿದರಿಗೆ ಸೀಸನ್ ಸಮಯ. ಪ್ರತೀ ವರ್ಷ ಸರಕಾರ ಈ ವೇಳೆಯಲ್ಲಿಯೇ ಲಾಕ್‍ಡೌನ್ ಮಾಡುತ್ತ ಬಂದಿದ್ದಾರೆ. ಇದರಿಂದ ಕಲಾವಿದರ ಬದುಕು ಬೀದಿಗೆ ಬರುತ್ತಿದೆ. ಕಲಾವಿದರು ಕಲೆಯನ್ನೇ ಅವಲಂಬಿಸಿ ಜೀವನ ಮಾಡುತ್ತಿದ್ದೇವೆ. ಹಾಗಾಗಿ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡಲು ಅವಕಾಶ ನೀಡಿ ಇಲ್ಲವೇ ಕಲಾವಿದರಿಗೆ ಪರಿಹಾರ ನೀಡಿ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಇನ್ನು ಕಳೆದ ಬಾರಿ ಕಲಾವಿದರಿಗೆ ಸರಕಾರ ಘೋಶಿಸಿದ ಫುಡ್ ಕಿಟ್ ಕುರಿತಂತೆ ಮಾತನಾಡಿದ ಅವರು, ನಮಗೆ ಯಾವುದೇ ರೀತಿಯ ಫುಡ್ ಕಿಟ್ ನೀಡಿಲ್ಲ. ಯಾರೋ ಕೆಲವರು ನೀಡಿದ ಆಹಾರ ಧಾನ್ಯಗಳಿಂದಲೇ ನಾವು ಎರಡು ವರ್ಷಗಳ ಕಾಲ ಜೀವನ ಸಾಗಿಸುತ್ತ ಬಂದಿದ್ದೇವೆ ಎಂದರು.
ಈ ವೇಳೆ ಜಿಲ್ಲೆಯ ವಿವಿಧ ಕಲಾವಿದರು, ಕನ್ನಡಪರ ಹೋರಾಟಗಾರರಾದ ದೀಪಕ್ ಗುಡಗನಟ್ಟಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

 

Tags:

error: Content is protected !!