ಜನ ಸಂಕಷ್ಟದಲ್ಲಿದ್ದಾಗ ಯಾವ ಸರ್ಕಾರ ಧಾವಿಸಿ ಬರುತ್ತದೆಯೋ ಅದು ಜೀವಂತ ಇದೆ ಅಂತಾ ಅರ್ಥ. ನಿಮ್ಮ ಸರ್ಕಾರ, ಕರ್ನಾಟಕದ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ರೈತರ ಪರವಾಗಿ ನಿಂತಿದೆ. ನಿಮ್ಮ ಕಷ್ಟದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು.

ಕಲಬುರ್ಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ಆಡಳಿತ ಭವನವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಹನಿ ನೀರಾವರಿ ಸ್ಪಿಂಕ್ಲರ್ ಪೈಪ್‍ನಲ್ಲಿ ಬಿಪಿಎಲ್ ಕಾರ್ಡದಾರರಿಗೆ ಮಾತ್ರ ಶೇ.90ರಷ್ಟು ಸಬ್ಸಿಡಿ ಇತ್ತು. ಆದರೆ ಈಗ ನಮ್ಮ ಸರ್ಕಾರ 2 ಹೆಕ್ಟೇರ್ ಭೂಮಿಗೆ ಸಿಮೀತವಾಗಿ ಎಲ್ಲ ರೈತರಿಗೂ ಶೇ.90ರಷ್ಟು ಸಬ್ಸಿಡಿ ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ 5 ಲಕ್ಷ ಮನೆಗಳಿಗೆ ಮಂಜೂರಾತಿ ಕೊಟ್ಟು ಗ್ರಾಮ ಪಂಚಾಯತಿಗಳಿಗೆ ಕಳಿಸಿದ್ದೇವೆ.
ಹಿಂದೆ ಇನ್ನೇನು ಸರ್ಕಾರ ಹೋಗಬೇಕು ಎನ್ನುವಾಗ ದುಡ್ಡು ಇಡದೇ ಮನೆ ಮಂಜೂರಾತಿ ಮಾಡಿ, ಚುನಾವಣೆಯಲ್ಲಿ ಮನೆ ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಒಂದು ಮನೆಯನ್ನು ಕಟ್ಟಿರಲಿಲ್ಲ. ಎರಡು ಸರ್ಕಾರ ಮುಗಿದರೂ ಕೂಡ ಆ ಮನೆಗಳು ನಿರ್ಮಾಣ ಆಗುತ್ತಿರಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ವಿರುದ್ಧ ಕುಟುಕಿದರು. ಹೀಗಾಗಿ 5 ಲಕ್ಷ ಮನೆಗಳು ನಮ್ಮ ಅವಧಿಯಲ್ಲಿಯೇ ಮುಗಿಯಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು
ಅಮೃತ ಯೋಜನೆಯಡಿ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಿ ಅಲ್ಲಿ ಒಬ್ಬರೂ ಕೂಡ ನಿವೇಶನ ರಹಿತರು ಇರಬಾರದು ಎಂಬ ಉದ್ದೇಶದಿಂದ ಸಂಪೂರ್ಣವಾಗಿ ಎಲ್ಲರಿಗೂ ನಿವೇಶನ, ಮನೆ ಕೊಡಬೇಕು ಎಂಬ ನಿರ್ಧಾರ ಮಾಡಿದ್ದೇವೆ. ಗ್ರಾಮ ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಅಮೃತ ಗ್ರಾಮ ಪಂಚಾಯತಿ ಯೋಜನೆ ತಂದಿದ್ದೇವೆ. 7500 ಸ್ತ್ರೀಶಕ್ತಿ ಸಂಘಗಳಿಗೆ ತಲಾ ಒಂದು ಲಕ್ಷ ರೂಪಾಯಿ ಕೊಟ್ಟು ಅವರು ಕೂಡ ಉದ್ಯೋಗದಲ್ಲಿ ಭಾಗಿಯಾಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ಎಸ್‍ಸಿ/ಎಸ್‍ಟಿ, ಒಬಿಸಿಯ ಸುಮಾರು 75 ಸಾವಿರ ಯುವಕರಿಗೆ ತರಬೇತಿ ಕೊಟ್ಟು ಉದ್ಯೋಗ ಕೊಡಲು ನಿರ್ಧರಿಸಿದ್ದೇವೆ ಎಂದರು.
ಇನ್ನು ಕೂಲಿಕಾರರು, ರೈತರ ಶ್ರಮವನ್ನು ನಾವು ಗುರುತಿಸಿದ್ರೆ ಮಾತ್ರ ಈ ದೇಶ, ರಾಜ್ಯ ಉದ್ಧಾರ ಆಗುತ್ತದೆ. ದೇವರು ಕೂಲಿಕಾರರ ಶ್ರಮದಲ್ಲಿದ್ದಾನೆ. ರೈತರ ಬೆವರಿನಲ್ಲಿದ್ದಾನೆ ಎಂದು ರವೀಂದ್ರನಾಥ್ ಟ್ಯಾಗೋರ್ ಅವರು ಹೇಳಿದ್ದರು. ಇಂತಹ ಆದರ್ಶಗಳನ್ನು ಇಟ್ಟುಕೊಂಡು ನಾವು ಆಡಳಿತ ಮಾಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಚಿಂತನೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತಂದು, ಅಭಿವೃದ್ಧಿಯಲ್ಲಿ ಎಲ್ಲರನ್ನು ಪಾಲ್ಗೊಳ್ಳುವಂತೆ ಮಾಡಬೇಕಿದೆ. ತಲಾವಾರು ಆದಾಯದಲ್ಲಿ ಇಡೀ ದೇಶದಲ್ಲಿ 4ನೇ ಸ್ಥಾನದಲ್ಲಿದೆ. ಬರುವ ದಿನಗಳಲ್ಲಿ ಆಳಂದ ತಾಲೂಕಿಗೆ ಒಳ್ಳೆಯ ಭವಿಷ್ಯವಿದೆ. ಜನರಿಗೆ ಒಳ್ಳೆಯದಾಗುತ್ತದೆ. ನಿಮ್ಮ ಅಭಿವೃದ್ಧಿಗೆ ನಾವು ಬದ್ಧರಾಗಿ, ಕಂಕಣಬದ್ಧರಾಗಿದ್ದೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಾಸಕ ಸುಭಾಷ ಆರ್.ಗುತ್ತೆದಾರ್, ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜ್‍ಕುಮಾರ ತೇಲ್ಕೂರ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.