ಕನ್ನಡ ಶ್ರೇಷ್ಠ ಸಾಹಿತಿ, ನಾಟಕಕಾರರು ಆಗಿ ತಮ್ಮದೇಯಾದ ಛಾಪು ಮೂಡಿಸಿದ್ದ ಡಾ.ಚಂದ್ರಶೇಖರ್ ಪಾಟೀಲ್ ಚಂಪಾ ಎಂದೇ ಬಹಳ ಪ್ರಸಿದ್ಧಿ ಪಡೆದಿದ್ದ ಹಿರಿಯರು ನಮ್ಮನ್ನು ಇಂದು ಅಗಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಬಹಳ ಸ್ವತಂತ್ರವಾಗಿ ಚಿಂತನೆ ಮಾಡುತ್ತಿದ್ದರು. ಒಂದು ರೀತಿಯಲ್ಲಿ ರೆಬೆಲ್ ಆಗಿದ್ದರು. ಅವರ ಲೇಖನದಲ್ಲಿ ಇರುವ ಮೊನಚು ವಿಷಯವನ್ನು ಪ್ರತಿಪಾದಿಸುವ ರೀತಿ ಮತ್ತು ಯಾವಾಗಲೂ ಪ್ರಸ್ತುತ ವಿಷಯಗಳ ಬಗ್ಗೆ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಪತ್ರಿಕೆ ನಡೆಸಿದ್ದಾರೆ, ಹಲವು ಲೇಖನ, ಪುಸ್ತಕ ಬರೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಿದ್ದರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಮಗೆ ಮತ್ತು ನಮ್ಮ ತಂದೆಯವರಿಗೆ ಬಹಳ ಆತ್ಮೀಯರಾಗಿದ್ದರು. ನಮ್ಮ ಊರಿನವರೇ, ಸವನೂರ ತಾಲೂಕಿನವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದ್ದಾಗಿನಿಂದಲೂ ಪರಿಚಯ, ನಮಗೆ ಮಾರ್ಗದರ್ಶಕರಾಗಿದ್ದರು. ನಾನು ಸಿಎಂ ಆದಾಗ ಬಹಳ ಸಂತೋಷ ಪಟ್ಟವರಲ್ಲಿ ಅವರು ಕೂಡ ಒಬ್ಬರು.
ರಾಜ್ಯದ ಸಾಹಿತ್ಯ ಲೋಕಕ್ಕೆ, ನಿರ್ಬಿಡೆಯಿಂದ ವಿಚಾರ ಹೇಳುವ ಲೋಕಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ಅಗಲಿಕೆಯ ದುಃಖ ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪೊಲೀಸ್ ಗೌರವ ಕೊಡುವ ತೀರ್ಮಾನ ಸರ್ಕಾರ ಮಾಡಿದೆ ಎಂದರು.