ಖಾನಾಪುರ ತಾಲೂಕು ಕಾಮಸಿನಕೊಪ್ಪದ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘ, ಗುಂಡೇನಟ್ಟಿಯ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಘ ಮತ್ತು ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗುಂಡೇನಟ್ಟಿಯ ಶ್ರೀ ಆತ್ಮಾನಂದ ಯೋಗಾಶ್ರಮದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗುಂಡೇನಟ್ಟಿಯ ಶ್ರೀ ಆತ್ಮಾನಂದ ಯೋಗಾಶ್ರಮದಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ಇಟಗಿ ಶಾಲೆಯ ಶಿಕ್ಷಕ ಶಿವಮೂರ್ತಿ ಕುರಗುಂದ ಯುವಕರಿಗೆ ಸ್ವಚ್ಛತೆ ಮತ್ತು ಶ್ರಮದಾನದ ಬಗ್ಗೆ ಸವಿಸ್ತಾರವಾಗಿ ಹೇಳಿದರು.
ಯುವಕರು ಚಿತ್ತವನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು, ದುಶ್ಚಟಗಳಿಗೆ ದಾಸರಾಗಬಾರದು. ಮನೆ ಹಾಗೂ ನಮ್ಮ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ನೆಹರೂ ಯುವ ಕೇಂದ್ರದ ಲೆಕ್ಕ ಪಾಲಕ ಮುತಾಲಿಕ್ ದೇಸಾಯಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಯುವ ಮಂಡಳಗಳು ಹೆಚ್ಚು ಅಭಿವೃದ್ಧಿಯಾದರೆ ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಗ್ರಾಮದಲ್ಲಿ ಗಿಡಮರಗಳು ಇದ್ದರೆ ಶುದ್ಧವಾದ ಗಾಳಿಯನ್ನು ನಾವು ಸೇವಿಸಬಹುದು ಎಂದು ತಿಳಿವಳಿಕೆ ನೀಡಿದರು.
ಸಮಾಜ ಸೇವಕರಾದ ಸುನಿಲ ಮಡ್ಡಿಮನಿ ಮಾತನಾಡಿ ಗ್ರಾಮದಲ್ಲಿ ಇನ್ನೂ ಬಯಲು ಬಹಿರ್ದೆಸೆ ಉಳಿದುಕೊಂಡಿದೆ. ಯುವಕರು ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬಹುದು ಎಂದು ಹೇಳಿದರು.
ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳು ರೋಹಿತ ಕಾಲ್ರಾ ಮಾತನಾಡಿ, ನಾವು ಸಸಿಗಳನ್ನು ನೆಡುವ ಅಷ್ಟೇ ಅಲ್ಲ ಅವುಗಳನ್ನು ಮುಂದೆ ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಮಲ್ಲೇಶಪ್ಪ ತೇಗೂರು ಪ್ರಕಾಶ ಬಡಿಗೇರ ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಹಿಂಡಲಕರ, ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಘ ದ ಅಧ್ಯಕ್ಷ ಭೀಮಣ್ಣ ಕಿಲಾರಿ, ನಿವೃತ್ತ ಶಿಕ್ಷಕ ಮಡಿವಾಳಿ, ಕಿಲಾರಿ ಯುವಧುರೀಣರು ಪಾಲ್ಗೊಂಡಿದ್ದರು. ನಾಗೇಂದ್ರ ಚೌಗುಲಾ ಸ್ವಾಗತಿಸಿದರು. ಚಿಕ್ಕ ಅಂಗ್ರೋಳ್ಳಿ ಜನನಿ ಯುವಕ ಸಂಘದ ಕೇದಾರಲಿಂಗ ಶಂಭೋಜಿ ವಂದಿಸಿದರು.