ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ದೇಶಾಧ್ಯಂತ ರೈತ ಮುಖಂಡರು ಹೆದ್ದಾರಿ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆ ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ-4ನ್ನು ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ.
ರೈತ ಮುಖಂಡ ಸಿದ್ದಗೌಡ ಮೊದಗಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ರೈತರು ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳು ರದ್ಧಾಗಲಿ, ನಮ್ಮ ಭೂಮಿ, ನಮ್ಮ ಹಕ್ಕು, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ರದ್ಧಾಗಲಿ, ಕರ್ನಾಟಕ ಸರ್ಕಾರದ ಭೂಸುಧಾರಣೆ ನೀತಿ ರದ್ಧಾಗಲಿ, ಎಪಿಎಂಸಿ ಮಾರ್ಕೆಟ್‍ಗಳನ್ನು ಮುಚ್ಚಲು ನಾವು ಬಿಡುವುದಿಲ್ಲ, ಸಂವಿಧಾನ ಬದ್ಧ ಹಕ್ಕು ನಮ್ಮದಾಗಲಿ ಎಂದು ನಾಮಫಲಕ ಹಿಡಿದುಕೊಂಡು. ತಲೆ ಮೇಲೆ ಕಲ್ಲು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಾಯಿ ಬಾಡಿ ಬಡಿದುಕೊಂಡು ಘೋಷಣೆ ಕೂಗಿದರು. ನಂತರ ಹೆದ್ದಾರಿ ಮೇಲೆಯೇ ಮಲಗಿ ಆಕ್ರೋಶ ವ್ಯಕ್ತಪಡಿಸಿದ ಮಹಿಳಾ ಹೋರಾಟಗಾರರು, ರಸ್ತೆಯಲ್ಲಿಯೇ ಉರುಳಾಡಿದರು.
ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ರೈತರು ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದರಿಂದ ಮತ್ತಷ್ಟು ಆಕ್ರೋಶಗೊಂಡಿರುವ ರೈತರು ದೇಶಾಧ್ಯಂತ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಿರೇಬಾಗೇವಾಡಿ ಟೋಲ್ ಬಳಿ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಹೋರಾಟಗಾರರ ನಡುವೆ ತೀವ್ರ ಮಾತಿನ ಚಕಮಕಿ ನಡಿತು. ನಂತರ ರೈತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕೂಡ ನಡಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಜಯಶ್ರೀ ಗುರನ್ನವರ, ಆಯಿಷಾ ಸನದಿ, ಅಖಿಲಾ ಪಠಾಣ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಒಟ್ಟಾರೆ ಹಿರೇಬಾಗೇವಾಡಿ ಟೋಲ್ ಬಳಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಂಡು ಬಂತು.