ಬೆಳಗಾವಿ ತಾಲೂಕಿನ ಸುಳಗಾ(ರಾಜಹಂಸಗಡ) ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗಂಗವ್ವ ಸಿದ್ದಪ್ಪ ನಾಯಿಕ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಹೌದು ಯಳ್ಳೂರ ಸಮೀಪದ ಸುಳಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜಹಂಸಗಡ ಗ್ರಾಮದ ಸರ್ಕಾರಿ ಕನ್ನಡ, ಮರಾಠಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲ ಆಗುವ ಉದ್ದೇಶದಿಂದ ಶೌಚಾಲಯ ನಿರ್ಮಾಣಕ್ಕೆ ಬುಧವಾರ ಗ್ರಾ.ಪಂ.ಅಧ್ಯಕ್ಷೆ ಗಂಗವ್ವ ನಾಯಿಕ್ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಮೊದಲ ಆಧ್ಯತೆ ಶಿಕ್ಷಣಕ್ಕೆ ನೀಡುವ ಉದ್ದೇಶದಿಂದ ಕಾಮಗಾರಿ ಆರಂಭಿಸಲಾಗಿದೆ. ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಗ್ರಾಮಸ್ಥರು, ಗ್ರಾ.ಪಂ.ಸದಸ್ಯರ ಸಹಕಾರದೊಂದಿಗೆ ನಮ್ಮ ಗ್ರಾಮಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಮಾಜಿ ಗ್ರಾ.ಪಂ.ಅಧ್ಯಕ್ಷ ಅರವಿಂದ ಪಾಟೀಲ್, ಬಸವಂತ ಪವಾರ್, ಪ್ರಮೋದ್ ನಾವಗೇಕರ್, ಪ್ರಭಾಕರ್ ನಾವಗೇಕರ್, ರಾಜು ಅಲಗುಂಟೆ, ಸಂದೀಪ್ ಮೋರೆ, ವಿಲಾಸ್ ಚೌಗುಲೆ, ಸಿದ್ದಪ್ಪ ನಾಯಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.